ಅಂತಾರಾಷ್ಟ್ರೀಯ ಗಣಿತಶಾಸ್ತ್ರಜ್ಞ ಸಿ.ಆರ್.ರಾವ್ ಇನ್ನಿಲ್ಲ
ನವದೆಹಲಿ: ಭಾರತೀಯ- ಅಮೆರಿಕನ್ ಗಣಿತಶಾಸ್ತ್ರಜ್ಞ ಸಿ.ಆರ್.ರಾವ್ ಎಂದೇ ಖ್ಯಾತಿ ಪಡೆದಿದ್ದ ಕಲ್ಯಂಪುಡಿ ರಾಧಾಕೃಷ್ಣ ರಾವ್(102) ಅವರು ಇಂದು ನಿಧನರಾಗಿದ್ದಾರೆ.
ಸಿ.ಆರ್.ರಾವ್ ಅವರು ಬಳ್ಳಾರಿಯ ಹಡಗಲಿಯ ತೆಲುಗು ಕುಟುಂಬದಲ್ಲಿ ಜನಿಸಿ ಬಳಿಕ ಶಾಲಾ ಶಿಕ್ಷಣವನ್ನು ಗುಡೂರು, ನುಜ್ವಿಡ್, ನಂದಿಗಾಮ ಮತ್ತು ವಿಶಾಕಪಟ್ಟಣಂನಲ್ಲಿ ಪೂರ್ಣಗೊಳಿಸಿದ್ದರು. ಆಂಧ್ರ ವಿಶ್ವವಿದ್ಯಾನಿಲಯದಿಂದ ಎಂ.ಎಸ್ ಸಿ (ಗಣಿತಶಾಸ್ತ್ರ) ಮತ್ತು 1943 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಅಂಕಿಅಂಶಗಳಲ್ಲಿ ಎಂ.ಎ ಪಡೆದರು. ಅವರು 1948 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿಎಚ್ ಡಿ ಪದವಿಯನ್ನು ಪಡೆದರು.
ಇನ್ನು ಸಿ.ಆರ್.ರಾವ್ ಅವರು ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಮಾಡಿರುವ ಸಾಧನೆಗಾಗಿ 1968ರಲ್ಲಿ ಪದ್ಮಭೂಷಣ, 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. 2023ರಲ್ಲಿ ನೊಬೆಲ್ ಪ್ರಶಸ್ತಿಗೆ ಸರಿಸಮಾನಾದ ಇಂಟರ್ ನ್ಯಾಶನಲ್ ಪ್ರೈಜ್ ಆಫ್ ಸ್ಟಾಟಿಸ್ಟಿಕ್ಸ್’ ಪ್ರಶಸ್ತಿಗೆ ಭಾಜನರಾಗಿದ್ದರು.