ಅಟಲ್ ಸೇತು “ಪಿಕ್ನಿಕ್ ಸ್ಪಾಟ್ ಅಲ್ಲ- ಫೋಟೋ ಕ್ಲಿಕ್ಕಿಸಲು ವಾಹನ ನಿಲ್ಲಿಸಿದರೆ ಎಫ್ಐಆರ್ – ಮುಂಬೈ ಪೊಲೀಸ್ ಎಚ್ಚರಿಕೆ
ನವದೆಹಲಿ: ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಎಂದೂ ಕರೆಯಲ್ಪಡುವ ಅಟಲ್ ಸೇತು ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ ಮತ್ತು ಇದನ್ನು ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಇದೀಗ ಸೇತುವೆ ಮೂಲಕ ಹಾದು ಹೋಗುವ ವಾಹನ ಸವಾರರು ದಾರಿ ಮಧ್ಯೆ ತಮ್ಮ ವಾಹನಗಳನ್ನು ನಿಲ್ಲಿಸಿ ಸೆಲ್ಪಿ ತೆಗೆಯೋದು, ಫೋಟೋಗಳನ್ನು ಕ್ಲಿಕ್ಕಿಸುವುದು, ರೈಲಿಂಗ್ ಮೇಲೆ ಹತ್ತುವುದು ಹಾಗೂ ರಸ್ತೆ ಬದಿಯಲ್ಲಿ ನಿಯಮ ಉಲ್ಲಂಘಿಸಿ ತ್ಯಾಜ್ಯ ಎಸೆಯುವುದು ಕಂಡು ಬಂದಿದೆ. ಈ ವಿಚಾರ ಕುರಿತು ಇದೀಗ ಮುಂಬೈ ಪೊಲೀಸರು ಪ್ರತಿಕ್ರಿಯಿಸಿ, “ 21.8 ಕಿಮೀ ಉದ್ದದ ಅಟಲ್ ಸೇತು ಪಿಕ್ನಿಕ್ ಸ್ಥಳವಲ್ಲ” ಎಂದು ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿದ್ದಾರೆ.
ಅಟಲ್ ಸೇತು ಖಂಡಿತಾ ಒಂದು ನೋಡಬೇಕಾದ ಸ್ಥಳವೇ ಆದರೆ ಸೇತುವೆ ಮಧ್ಯ ವಾಹನ ನಿಲ್ಲಿಸಿ ಫೋಟೋ ಕ್ಲಿಕ್ಕಿಸುವುದು ಕಾನೂನುಬಾಹಿರ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ನಲ್ಲಿ ನಿಮ್ಮ ವಾಹನ ನಿಲ್ಲಿಸಿದರೆ ಎಫ್ಐಆರ್ ಹಾಕುವ ಸ್ಥಿತಿ ನಿರ್ಮಾಣ ವಾಗಬಹದು ಎಂದು ಪೋಸ್ಟ್ನಲ್ಲಿ ಮುಂಬೈ ಪೊಲೀಸರು ಎಚ್ಚರಿಸಿದ್ದಾರೆ.