ಅಪಘಾತ ಪ್ರಕರಣ – ನಟ ನಾಗಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು: ಅಪಘಾತ ಪ್ರಕರಣದಲ್ಲಿ ನಟ ನಾಗಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದ್ದು, ಸದ್ಯ 60 ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದಾರೆ.
ಬೆಂಗಳೂರಿನ ಕೋಣನ ಕುಂಟೆ ಸಮೀಪ ಅಕ್ಟೋಬರ್ 30ರಂದು ಅಪಘಾತ ಸಂಭವಿಸಿದ್ದು, ನಾಗಭೂಷಣ್ ಓಡಿಸುತ್ತಿದ್ದ ಕಾರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಗುದ್ದಿತ್ತು. ಈ ವೇಳೆ ಪ್ರೇಮಾ ಎಂಬುವವರು ಮೃತಪಟ್ಟು ಅವರ ಪತಿ ಕೃಷ್ಣ ಅವರಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಅವರಿಗೆ ಚೇತರಿಕೆ ಕಂಡಿದ್ದು, ಅವರು ಹೇಳಿಕೆ ದಾಖಲು ಮಾಡಿದ್ದಾರೆ.
ಇನ್ನು ಅಪಘಾತ ಪ್ರಕರಣ ಸಂಬಂಧ ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು 80 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 60 ಸಾಕ್ಷಿಗಳನ್ನು ಕಲೆಹಾಕಲಾಗಿದೆ.
ಸಿಸಿಟಿವಿ ಮಾತ್ರವಲ್ಲದೆ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಪ್ರೇಮಾ ಹಾಗೂ ಕೃಷ್ಣ ಅವರು ಪಾದಾಚಾರಿ ಮಾರ್ಗದಿಂದ ನೇರ ರಸ್ತೆಗೆ ಇಳಿದಿದ್ದರು ಎಂದು ಹೇಳಿಕೆ ನೀಡಿದ್ದರು. ಏಕಾಏಕಿ ಕಾರಿಗೆ ಅಡ್ಡಲಾಗಿ ಬಂದ ಕಾರಣ ಕಾರ್ ಕಂಟ್ರೋಲ್ ಸಿಗದೆ ಆ್ಯಕ್ಸಿಡೆಂಟ್ ಅಗಿದೆ ಎಂದು ನಾಗಭೂಷಣ್ ಹೇಳಿಕೆ ನೀಡಿದ್ದರು. ಆದರೆ ವೇಗವಾಗಿ ಬಂದ ಕಾರು ಫುಟ್ಪಾತ್ ಮೇಲೆ ಹೋಗುತಿದ್ದ ನಾನು ಮತ್ತ ನನ್ನ ಪತ್ನಿ ಪ್ರೇಮ ಅವರಿಗೆ ಡಿಕ್ಕಿ ಯಾಗಿತ್ತು ಎಂದು ಕೃಷ್ಣ ಹೇಳಿಕೆ ನೀಡಿದ್ದಾರೆ.