ಅಬಕಾರಿ ನೀತಿ ಹಗರಣ: ಕೇಜ್ರಿವಾಲ್ಗೆ ನಾಲ್ಕನೇ ಬಾರಿ ಸಮನ್ಸ್ ಜಾರಿ ಮಾಡಿದ ಇಡಿ
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಇಡಿ)ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಾಲ್ಕನೇ ಬಾರಿ ಸಮನ್ಸ್ ಜಾರಿ ಮಾಡಿದೆ. ಸಮನ್ಸ್ ನಲ್ಲಿ ಜನವರಿ 18 ರಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
55 ವರ್ಷದ ಕೇಜ್ರಿವಾಲ್ ಅವರು ಇಡಿ ಮುಂದೆ ಮೂರನೇ ಬಾರಿ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು. ನವೆಂಬರ್ 2 ರಂದು, 21ರಂದು ಹಾಗೂ ಜನವರಿ 3 ರಂದು ಮೂರು ಬಾರಿ ಸಮನ್ಸ್ ನೀಡಲಾಗಿತ್ತು. ವಿಚಾರಣೆಗೆ ಗೈರು ಆಗಿದ್ದ ಕೇಜ್ರಿವಾಲ್ ಅವರು ತಮಗೆ ನೀಡಿರುವ ನೋಟಿಸ್ ಕಾನೂನು ಬಾಹಿರ ಎಂದು ಲಿಖಿತ ಉತ್ತರ ಕಳುಹಿಸಿದ್ದರು.
೩ನೇ ಸಮನ್ಸ್ ನಂತರ ಆಮ್ ಆದ್ಮಿ ಪಕ್ಷವು ಇಡಿಯೊಂದಿಗೆ ಸಹಕರಿಸಲು ಬಯಸುತ್ತದೆ ಎಂದು ಹೇಳಿತ್ತು. ಈ ನಾಲ್ಕನೇ ಸಮನ್ಸ್ ಬಳಿಕ ಅರವಿಂದ್ ಕೇಜ್ರಿವಾಲ್ ಇಡಿ ಮುಂದೆ ಹಾಜರಾಗುತ್ತಾರೋ ಇಲ್ಲವೋ ಕಾದುನೋಡಬೇಕಿದೆ.
ಕಳೆದ ವರ್ಷ ಇದೇ ಪ್ರಕರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಮನೀಷ್ ಸಿಸೋಡಿಯಾ ಅವರನ್ನು ಇಡಿ ಬಂಧಿಸಿತ್ತು.