Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಬಕಾರಿ ಸುಂಕ ಹೆಚ್ಚಳ ಎಫೆಕ್ಟ್ : ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯಪ್ರಿಯರು – ಎಣ್ಣೆ ಮಾರಾಟ ಹೆಚ್ಚಳಕ್ಕೆ ಸಿಎಂ ಸೂಚನೆ

ಬೆಂಗಳೂರು : ಅಬಕಾರಿ ಸುಂಕ ಹೆಚ್ಚಳ ಆಗುತ್ತಿದ್ದಂತೆ ಬಾರ್‌, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದೆ. ಹೌದು ಕಾಂಗ್ರೆಸ್‌ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಶೇ.20ರವರೆಗೆ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲಿಯೇ ಮೊದಲ ತ್ರೈಮಾಸಿಕದಲ್ಲಿ ಮದ್ಯ ಮಾರಾಟ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಇದರಿಂದ ಸರ್ಕಾರದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ಮದ್ಯದ ಮಾರಾಟ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಸರ್ಕಾರಕ್ಕೆ ಪ್ರಮುಖ ಆದಾಯವನ್ನು ತರುವ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ವಾಣಿಜ್ಯ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಸಭೆ ಮಾಡಿದ್ದು, ಮುಂದಿನ ಮೂರು ತ್ರೈಮಾಸಿಕದಲ್ಲಿ ಆದಾಯ ಸಂಗ್ರಹ ಹೆಚ್ಚಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ತೆರಿಗೆ ಸಂಗ್ರಹದ ಗುರಿ ತಲುಪಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮದ್ಯ ಮಾರಾಟ ಇಳಿಕೆ ಆಗದಂತೆ ಕ್ರಮವಹಿಸಿ, ಮದ್ಯ ಮಾರಾಟ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ಈಗಾಗಲೇ ಮಂಡನೆ ಮಾಡಿರುವ ಬಜೆಟ್ ಗುರಿಗಿಂತ ಹೆಚ್ಚಿನ ಆದಾಯ ಸಂಗ್ರಹಕ್ಕೆ ಪ್ರಯತ್ನಿಸಬೇಕು. ಎರಡನೇ ತ್ರೈಮಾಸಿಕ ಮುಗಿದ ನಂತರ ಮತ್ತೊಂದು ಸಭೆ ನಡೆಸೋದಾಗಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.