ಅಸ್ಥಿಪಂಜರ ಪತ್ತೆ ಪ್ರಕರಣ: ಮೃತ ಜಗನ್ನಾಥ ರೆಡ್ಡಿ ಸಮಾಜದಿಂದ ವಿಮುಖರಾಗಿದ್ದು ಏಕೆ?
ಚಿತ್ರದುರ್ಗ: ಪಾಳು ಮನೆಯಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರುತನಿಖೆ ಮುಂದುವರಿಸಿದ್ದು, ಕೆಲವು ಮಹತ್ವದ ಸಂಗತಿಗಳನ್ನು ಪತ್ತೆ ಮಾಡಿದ್ದಾರೆ.
ಪಾಳು ಬಿದ್ದ ಮನೆಯಲ್ಲಿ ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ ಅವರ ಅಸ್ತಿಪಂಜರ ಸೇರಿದಂತೆ ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಮೃತ ಜಗನ್ನಾಥ ರೆಡ್ಡಿ ಸ್ವಗ್ರಾಮದಲ್ಲಿ ಅವರ ಪುತ್ರ ಬಾಬುರೆಡ್ಡಿ (ಎನ್.ಜೆ.ಕೃಷ್ಣ) ಪರಿಚಯ ಮಾತ್ರ ಕೆಲವರಿಗೆ ಇದ್ದು, ಉಳಿದವರ ಪರಿಚಯ ಅಷ್ಟಾಗಿ ಯಾರಿಗೂ ಇರಲಿಲ್ಲ.
ಜಗನ್ನಾಥ ರೆಡ್ಡಿ ಅವರ ಪುತ್ರ ಕೃಷ್ಣ ಅವರು ಬಾಬುರೆಡ್ಡಿ ಎಂದೇ ಹೆಸರುವಾಸಿ. ಇವರ ನಿಜವಾದ ಹೆಸರು ಎಲ್ಲರಿಗೂ ತಿಳಿದದ್ದೇ ಈ ಪ್ರಕರಣ ಬೆಳಕಿಗೆ ಬಂದ ಬಳಿಕ. ಇನ್ನು ಬಾಬುರೆಡ್ದಿ ಅವರನ್ನು ಹೊರತು ಪಡಿಸಿ ಅವರ ತಂದೆ, ತಾಯಿ ಹಾಗೂ ಉಳಿದ ಯಾರ ಪರಿಚಯವೂ ಸಂಬಂಧಿಕರಿಗೆ ಇರಲಿಲ್ಲ. ಕೆಲ ಸಂಬಂಧಿಕರು ಏಳೆಂಟು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿದ್ದ ಜಗನ್ನಾಥ ರೆಡ್ಡಿ ಅವರ ಮನೆಗೆ ಹೋಗಿ ಬರುತ್ತಿದ್ದರು.
ಆದರೆ ಜಗನ್ನಾಥ ರೆಡ್ಡಿ ಅವರು ಮನೆಗೆ ಹೋದವರಿಗೆ ಅಷ್ಟಾಗಿ ಸ್ಪಂದಿಸುತ್ತಿರಲ್ಲಿ. ಆದ ಕಾರಣ ಜಗನ್ನಾಥ ರೆಡ್ಡಿ ಅವರ ಕುಟುಂಬದವರಿಂದ ಒಬ್ಬೊಬ್ಬರಾಗಿ ದೂರ ಉಳಿಯಲು ಪ್ರಾರಂಭಿಸುತ್ತಾರೆ. ಯಾರಾದರೂ ಸಂಬಂಧಿಕರು ಸಿಕ್ಕಾಗ ಬಾಬುರೆಡ್ಡಿ ಸಹ ಬೆಂಗಳೂರಿನಲ್ಲಿರುತ್ತೇವೆ ಎಂದು ಹೇಳುತ್ತಿದ್ದರಂತೆ. ಕುಟುಂಬದ ಕಾರ್ಯಕ್ರಮಗಳಿಗೆ ಬಾಬುರೆಡ್ಡಿ ಮಾತ್ರವೇ ಹಾಜರಾಗುತ್ತಿದ್ದರು. ಜಗನ್ನಾಥ ರೆಡ್ಡಿ ಅವರು ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಹತ್ತಿರದ ಸಂಬಂಧಿಕರ ಕಾರ್ಯಕ್ರಮಗಳಿಗೂ ಹಾಜರಾಗದೆ ಸಮಾಜದಿಂದ ದೂರ ಉಳಿಯಲು ಪ್ರಾರಂಭಿಸುತ್ತಾರೆ. ಇದರಿಂದ ಸಂಬಂಧಿಕರು ಬೇಸರಗೊಂಡಿದ್ದರಂತೆ.
ಇನ್ನು ಕೆಲ ವರ್ಷಗಳ ಹಿಂದೆ ಬಾಬುರೆಡ್ಡಿ ಅವರು ಡಿಎಸ್ ಹಳ್ಳಿಯಲ್ಲಿ ತೋಟ ನಿರ್ಮಿಸಿ, ತೆಂಗು, ಮಾವು ಹಾಗೂ ಇತ್ಯಾದಿ ಬೆಳೆಯನ್ನು ಬೆಳೆದು ಉತ್ತಮ ಹೈನುಗಾರಿಕೆ ಮಾಡುತ್ತಿದ್ದರು. ಬಾಬುರೆಡ್ಡಿ ಅವರಿಗೆ ಇಷ್ಟೆಲ್ಲಾ ಇದ್ದು ಅವರ ತಂದೆ ಹಾಗೂ ಉಳಿದವರ ಸಾವು ಯಾರಿಗೂ ತಿಳಿಯದಂತೆ ನಿಗೂಢವಾಗಿ ಯಾಕೆ ಆಯಿತು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.