ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವಕನಿಗೆ ಮಹಿಳೆಯಿಂದ ಲೈಂಗಿಕ ಕಿರುಕುಳ
ಬೆಂಗಳೂರು:ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ಯುವಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡಿದ್ದು ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬಾಲಿವುಡ್ ನಿರ್ದೇಶಕಿ ದೀಪಿಕಾ ನಾರಾಯಣ ಭಾರದ್ವಾಜ್ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು ಬೆಂಗಳೂರು ನಗರ ಪೊಲೀಸರ ಖಾತೆಗೂ ಟ್ಯಾಗ್ ಮಾಡಿದ್ದಾರೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಕೂಡಲೇ ಸಮೀಪದ ಠಾಣೆಗೆ ದೂರು ನೀಡಿ ಜತೆಗೆ ತಮ್ಮ ಮೊಬೈಲ್ ನಂಬರ್ ಅನ್ನು ತಮಗೆ ನೀಡುವಂತೆ ಸೂಚಿಸಿದ್ದಾರೆ.
ಸಂತ್ರಸ್ಥೆ ಯುವಕ ಹೇಳುವ ಪ್ರಕಾರ ಡೇಟಿಂಗ್ ಆ್ಯಪ್ ಮೂಲಕ ಆ ಮಹಿಳೆ ಯುವಕನಿಗೆ ಪರಿಚಯವಾಗಿ ಒಮ್ಮೆ ಭೇಟಿಯಾದ ಮಹಿಳೆ, ಆತನೊಂದಿಗೆ ಆತ್ಮೀಯವಾಗಲು ಮುಂದಾಗಿದ್ದಾಳೆ ಎನ್ನಲಾಗಿದೆ.
ಆದರೆ, ಯುವಕ ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಅದರಿಂದ ಬೇಸರಗೊಂಡ ಆಕೆ, ತನ್ನನ್ನು ಮತ್ತೂಮ್ಮೆ ಭೇಟಿಯಾಗ ಬೇಕೆಂದು ದುಂಬಾಲು ಬಿದ್ದಿದ್ದಾಳೆ.
ಆದರೆ ಯುವಕ ಅದನ್ನು ತಿರಸ್ಕರಿಸಿದ್ದಾನೆ.ಆದರೂ ಬಿಡದ ಮಹಿಳೆ “ನಿನ್ನ ಭಾವಚಿತ್ರವನ್ನು ಮಾಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ರೀತಿ ಮಾಡದಿರಲು ತಾನೂ ಕೇಳಿದಷ್ಟು ಹಣ ಕೊಡಬೇಕೆಂದು ಧಮ್ಕಿ ಹಾಕಿದ್ದಾಳೆ.
ಅದರಿಂದ ಬೇಸತ್ತ ಯುವಕ ಠಾಣೆಗೆ ದೂರು ನೀಡಲು ಹೋಗಿದ್ದಾನೆ.ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ, ಮಹಿಳೆ ನಿಮ್ಮ ವಿರುದ್ಧ ಈಗಾಗಲೇ ದೂರು ನೀಡಿದ್ದಾಳೆ.
ಹೀಗಾಗಿ ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.ಅದರಿಂದ ಯುವಕ ಆತಂಕಗೊಂಡಿದ್ದಾನೆ. ಹೀಗಾಗಿ ಆ ಯುವಕನ ಜತೆ ನಾನು ಮಾತನಾಡಿದ್ದೇನೆ ಮತ್ತು ಅವನಿಗೆ ಹೋರಾಡಲು ಆತ್ಮವಿಶ್ವಾಸವನ್ನು ನೀಡಿದ್ದೇನೆ.
ಅಲ್ಲದೇ ಸಂಬಂಧಪಟ್ಟ ಬೆಂಗಳೂರು ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದ್ದು, ಸಕರಾತ್ಮಕ ಸ್ಪಂದನೆ ನೀಡುವುದಾಗಿ ಹೇಳಿದ್ದಾರೆ ಎಂದು ದೀಪಿಕಾ ನಾರಾಯಣ ಭಾರದ್ವಾಜ್ ಹೇಳಿದ್ದಾರೆ.