ಆಪರೇಷನ್ ಥಿಯೇಟರ್ ನಲ್ಲಿ ಪ್ರಿ-ವೆಡ್ಡಿಂಗ್ ಶೂಟ್..!
ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಪ್ರಿ-ವೆಡ್ಡಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ಗಳು ವಿವಿಧ ರೀತಿಯಲ್ಲಿ ನಡೆಯುತ್ತವೆ. ಅಂತೆಯೇ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೊಬ್ಬರು ಪ್ರೀ-ವೆಡ್ಡಿಂಗ್ ವೀಡಿಯೋ ಶೂಟ್ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಭರಮಸಾಗರ ಮೂಲದ ಜಿಲ್ಲಾಸ್ಪತ್ರೆಯ ಗುತ್ತಿಗೆ ಅಧಾರಿತ ವೈದ್ಯ ಡಾ.ಅಭಿಷೇಕ್ ಎಡವಟ್ಟು ಮಾಡಿಕೊಂಡವರು. ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ವ್ಯಕ್ತಿಗೆ ಆಪರೇಷನ್ ಮಾಡುತ್ತಿರುವಂತೆ ಜೋಡಿ ವೀಡಿಯೋ ಶೂಟ್ ಮಾಡಿಕೊಂಡಿದೆ. ಸದ್ಯ ಡಾ. ಅಭಿಷೇಕ್ ಜೋಡಿಯ ಪ್ರಿ-ವೆಡ್ಡಿಂಗ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವೈದ್ಯರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ದುರ್ಬಳಕೆ ಬಗ್ಗೆ ಜನ ಕಿಡಿಕಾರುತ್ತಿದ್ದಾರೆ.