ಇಂಡಿಗೋ – 1 ಸಾವಿರ ಕೋಟಿ ನಷ್ಟವನ್ನು ಮೆಟ್ಟಿ 3 ಸಾವಿರ ಕೋಟಿ ಲಾಭಕ್ಕೆ ನೆಗೆತ
ನವದೆಹಲಿ: ವರ್ಷದ ಹಿಂದೆ ಒಂದು ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದ್ದ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ (ಇಂಡಿಗೋ) ಲಾಭದತ್ತ ನುಗ್ಗುತ್ತಿದೆ. ಇದೀಗ ಅದು 3 ಸಾವಿರ ಕೋಟಿ ಲಾಭಕ್ಕೆ ನೆಗೆತ ಕಂಡಿದೆ. ಹೌದು. ಇಂಡಿಗೋ ಬುಧವಾರ ಜೂನ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದೆ. 2023-24ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 3,090 ಕೋಟಿ ರೂಪಾಯಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಇದು ತನ್ನ ಅತ್ಯಧಿಕ ತ್ರೈಮಾಸಿಕ ನಿವ್ವಳ ಲಾಭವಾಗಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಕಳೆದ ವರ್ಷ ಇದೇ ಅವಧಿಯಲ್ಲಿ 1,064 ಕೋಟಿ ರೂಪಾಯಿ ನಷ್ಟದಲ್ಲಿತ್ತು. ಇದಲ್ಲದೆ 2022-23 ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಲಾಭವು ₹919.8 ಕೋಟಿ ಲಾಭದಿಂದ 236 ಶೇಕಡಾ ಜಿಗಿದಿದೆ ಎಂದು ಸಂಸ್ಥೆ ಹೇಳಿದೆ. ಪ್ರಸ್ತುತ ಆದಾಯ 16,683 ಕೋಟಿ ರೂ.ಗೆ ತಲುಪಿದ್ದು, ಈ ಮೂಲಕ ವರ್ಷದಿಂದ ವರ್ಷಕ್ಕೆ ಕಾರ್ಯಾಚರಣೆಯಲ್ಲಿನ ಆದಾಯ ಶೇಕಡಾ 30 ಏರಿಕೆ ಕಂಡಂತಾಗಿದೆ. ಈ ಲಾಭ ಬಜೆಟ್ ಕ್ಯಾರಿಯರ್ನ ತ್ರೈಮಾಸಿಕದಲ್ಲಿ ಅತ್ಯಧಿಕ ನಿವ್ವಳ ಲಾಭವಾಗಿದೆ. ಕಂಪನಿಯ ಬಡ್ಡಿ, ತೆರಿಗೆ, ಸವಕಳಿ, ಭೋಗ್ಯ, ಬಾಡಿಗೆಯಲ್ಲಿನ ಗಳಿಕೆ ಮೊದಲ ತ್ರೈಮಾಸಿಕದಲ್ಲಿ 5,211 ಕೋಟಿ ರೂಪಾಯಿ ಆಗಿದ್ದು, ಇದು ಕಳೆದ ವರ್ಷದ ಇದೇ ತ್ರೈಮಾಸಿಕದ 717 ಕೋಟಿ ರೂಪಾಯಿಗಿಂತ ಹಲವು ಪಟ್ಟು ಹೆಚ್ಚಾಗಿದೆ.