Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂಡಿಯಾ-ಭಾರತ ವಿವಾದ ಕುರಿತು ಹೇಳಿಕೆ ನೀಡದಂತೆ ಪ್ರಧಾನಿ ಮೋದಿ ಸಚಿವರಿಗೆ ತಾಕೀತು

ನವದೆಹಲಿ:ಕಳೆದ ಎರಡು ದಿನಗಳಿಂದ ರಾಜಕೀಯ ವಲಯದಲ್ಲಿ ಇಂಡಿಯಾವನ್ನು ಭಾರತ ಎಂದು ಮರುನಾಮಕಾರಣ ವಿಚಾರ ಕೋಲಾಹಲವನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೆ ಈ ವಿಚಾರವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಂತೆ ಪ್ರಧಾನಿ ಮೋದಿ ಸಚಿವರಿಗೆ ಸೂಚನೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ಸಚಿವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದ್ದಾರೆ. ಕಳೆದ ಎರಡು ದಿನಗಳಿಂದ, ಪ್ರತಿಪಕ್ಷಗಳು ಈ ವಿಷಯದ ಬಗ್ಗೆ ಎರಡು ಸಭೆಗಳನ್ನು ನಡೆಸಿವೆ.
ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚಿಸಬಹುದಾದ 9 ವಿಷಯಗಳ ಪಟ್ಟಿಗಳ ಬಗ್ಗೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ ಕಚೇರಿಯಿಂದ ಜಿ20 ಪ್ರತಿನಿಧಿಗಳಿಗೆ ಕಳುಹಿಸಲಾದ ಔತಣಕೂಟದ ಆಮಂತ್ರಣದಲ್ಲಿ ದ್ರೌಪದಿ ಮುರ್ಮು ಅವರನ್ನು ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಕರೆಯಲಾಗಿದ್ದು ಈ ಕುರಿತು ಕಾಂಗ್ರೆಸ್ ಕಿಡಿ ಕಾರಿತ್ತು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ , ಸಂವಿಧಾನ ಒಂದನೇ ವಿಧಿಯಡಿ, ಭಾರತ, ಅದು ಇಂಡಿಯಾ, ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ಈ ರಾಜ್ಯಗಳ ಒಕ್ಕೂಟ ಆಕ್ರಮಣಕ್ಕೆ ಒಳಗಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಎರಡು ದಿನಗಳ ಹಿಂದಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂಡಿಯಾ ಎಂದು ಹೇಳುವುದನ್ನು ಇನ್ನು ಬಿಡಿ, ಭಾರತ ಎಂದು ಹೇಳಿ ಎಂದು ಮನವಿ ಮಾಡಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಹೀಗಾಗಿ ಇಂಡಿಯಾ- ಭಾರತ್‌ ಹೆಸರಿನ ವಿಚಾರವಾಗಿ ಯಾರು ಕೂಡ ಯಾವುದೇ ರೀತಿಯ ಹೇಳಿಕೆ ನೀಡಬೇಡಿ ಅದರಿಂದ ದೂರವಿರಿ ಎಂದು ತಮ್ಮ ಮಂತ್ರಿಗಳಿಗೆ ಸೂಚನೆ ಮೋದಿ ಸಂದೇಶ ರವಾನೆ ಮಾಡಿದ್ದಾರೆ.