Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತಕ್ಕಾಗಿ ಕಾಂಗ್ರೆಸ್‌ನಿಂದ ರಾಜ್ಯದ ಹಿತ ಬಲಿ’ – ಬೊಮ್ಮಾಯಿ

ಬೆಂಗಳೂರು: ಇಂಡಿಯಾ ಮೈತ್ರಿಕೂಟದ ಡಿಎಂಕೆ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ಹಿತ ಬಲಿಕೊಡುತ್ತಿದ್ದು, ಕಾವೇರಿ ಸಮಸ್ಯೆ ಪರಿಹಾರಕ್ಕೆ ಮಾತುಕತೆಗೆ ತಮಿಳುನಾಡಿನ ಸರ್ಕಾರದ ಮನವೊಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಂದ್ ಹಾಗೂ ಕಾವೆರಿ ಜಲಾನಯನ ಪ್ರದೇಶದಲ್ಲಿ ಪ್ರತಿಭಟನೆ ಯಶಸ್ವಿಯಾಗಿದೆ. ಜನರ ಆಕ್ರೋಶ ಕಟ್ಟೆ ಒಡೆದಿದೆ. ಇಷ್ಟೆಲ್ಲ ಆದರೂ ಸರ್ಕಾರ ಎಚ್ಚೆತ್ತುಕೊಂಡತೆ ಕಾಣಿಸುತ್ತಿಲ್ಲ ಎಂದರು.
ರಾಜ್ಯದಲ್ಲಿ ಹಲವಾರು ಬಾರಿ ಪ್ರತಿಭಟನೆಗಳು ನಡೆದಿವೆ. ನಾವು ಸರ್ಕಾರದಲ್ಲಿ ಇದ್ದಾಗ ಪ್ರತಿಭಟನೆ ಹತ್ತಿಕ್ಜುವ ಕೆಲಸ ಮಾಡಿರಲಿಲ್ಲ. ಮುಖ್ಯಮಂತ್ರಿಗಳು ಪ್ರತಿಭಟನೆ ಹತ್ತಿಕ್ಕುವುದಿಲ್ಲ ಅಂತ ಹೇಳಿದರು. ಆದರೆ,ಎಲ್ಲ ಕಡೆ ಪ್ರತಿಭಟನಾಕಾರರನ್ನು ಬಂಧಿಸುವ ಕೆಲಸ ಮಾಡಿದ್ದಾರೆ. ಇದರ ನಡುವೆ ಹೋರಾಟಗಾರರೂ ಯಶಸ್ವಿಯಾಗಿ ಬಂದ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ ಒಗ್ಗಟ್ಟಿನ ಅಗತ್ಯ ಇತ್ತು. ಜನ ಮತ್ತು ಸಂಘಟನೆಗಳು ಒಗ್ಗಟ್ಟಿನಿಂದ ಬಂದ್ ಯಶಸ್ವಿ ಮಾಡಿವೆ ಎಂದು ಹೇಳಿದರು.

ಕೊವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನವರು ರಾಜಕಾರಣಕ್ಕಾಗಿ ಮೆಕೆದಾಟು ಪಾದಯಾತ್ರೆ ಮಾಡಿದ್ದರು, ಆಗ ನಾವು ನಿಮಗೆ ಸಮಾವೇಶ ಮಾಡಲು ಅವಕಾಶ ಕೊಟ್ಟಿದ್ದೇವು. ಈಗ ಹೊರಾಟಗಾರರು ಫ್ರೀಡಂ ಪಾರ್ಕ್ ವರೆಗೂ ಜಾಥಾ ನಡೆಸಲು ಬಿಡುತ್ತಿಲ್ಲ. ಅವರೇನು ನಿಮ್ಮ ಅಧಿಕಾರ, ನಿಮ್ಮಿಂದ ಸಹಾಯ ಕೇಳುತ್ತಿಲ್ಲ. ನಿಮ್ಮ ಸರ್ಕಾರ ಕಾವೇರಿ ಕಾಪಾಡಲು ವಿಫಲವಾಗಿದೆ‌ ಅಂತ ಗಮನ ಸೆಳೆಯಲು ಪ್ರತಿಭಟನೆ ನಡೆಸಲು ಅವಕಾಶ ಕೊಡುತ್ತಿಲ್ಲ. ಸರ್ಕಾರ ಪೊಲೀಸರ ಮೂಲಕ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರೈತರು ರಾಜಕಾರಣ ಮಾಡುತ್ತಾರಾ ?
ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತ ಸಂಘದವರು ಕನ್ನಡ ಸಂಘದವರು ರಾಜಕಾರಣ ಮಾಡುತ್ತಾರಾ? ನಿಮ್ಮ ಒಕ್ಕೂಟದ ಸ್ನೇಹಿತರ ಹಿತ ಕಾಯುವುದನ್ನು ಬಿಟ್ಟು ರಾಜ್ಯದ ಹಿತ ಕಾಯಿರಿ.

ಇವರು ತಮಿಳುನಾಡಿಗೆ ನೀರು ಬಿಟ್ಟು ಈಗ ಪ್ರಧಾನಿ ಮಧ್ಯಸ್ತಿಕೆ ಕೇಳಿದರೆ ಅದನ್ನು ಹೇಗೆ ಮಾಡಲು ಸಾಧ್ಯವಿದೆ‌. ತಮಿಳುನಾಡು ಇಂಡಿಯಾದಲ್ಲಿದೆ‌. ಕಾಂಗ್ರೆಸ್ ಮಿತ್ರ ಪಕ್ಷವಾಗಿದೆ. ಸೋನಿಯಾಗಾಂಧಿ ಖರ್ಗೆ ಅವರನ್ನು ಕರೆಯಿಸಿ ಮಾತನಾಡಿಸಲಿ. ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರವನ್ನು ಮಾತುಕತೆಗೆ ಒಪ್ಪಿಸಲಿ ಎಂದು ಹೇಳಿದರು.

ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂದು ಮಾಜಿ ಪ್ರಧಾನಿ ದೇವೆಗೌಡರು ಹೇಳಿದ್ದಾರೆಂದು ಕೇಳಿದ ಪ್ರಶ್ನೆಗೆ ಅವರು, ನೇರವಾಗಿ ಮಧ್ಯ ಪ್ರವೇಶ ಮಾಡಿ ಅಂತ ಹೇಳಲಿ, ಕಾವೇರಿ ಟ್ರಿಬ್ಯುನಲ್ ಆದೇಶ ಆದ ಮೇಲೆ ಸುಪ್ರೀಂ ಆದೇಶ ಆದ ಹಾಗೆ ಸುಪ್ರೀಂ ನಲ್ಲಿ ವಿಚಾರಣೆ ಹಂತದಲ್ಲಿದ್ದಾಗ ಹಿಂದಿನ ಪ್ರಧಾನಿಗಳು ಮಧ್ಯಪ್ರವೇಶ ಮಾಡಿದ್ದರು ಎಂದರು.