Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದಿನಿಂದ ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ

ಬೆಂಗಳೂರು : ಉಚಿತ ಬಸ್ ಪ್ರಯಾಣ ಯಾವಾಗ? ಅಂತಾ ಕೇಳುತ್ತಿದ್ದವರಿಗೆ ಆ ದಿನ ಇಂದು ಬಂದೇ ಬಿಟ್ಟಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೊಟ್ಟ ಮೊದಲನೇ ಗ್ಯಾರಂಟಿಯಾಗಿ ಉಚಿತ ಬಸ್ ಪ್ರಯಾಣದ ಭರವಸೆಯನ್ನು ಈಡೇರಿಸುವ ಕ್ಷಣ ಹತ್ತಿರ ಬಂದಿದೆ. ಇಂದು ಮಧ್ಯಾಹ್ನ ಒಂದು ಗಂಟೆಯ ತರುವಾಯ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಯೊಬ್ಬ ಹೆಣ್ಣು ಮಕ್ಕಳು, ಮಹಿಳೆಯರು ಶೂನ್ಯ ಟಿಕೆಟ್ ಪಡೆದು ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ. ಆದರೆ, ಉಚಿತವಾಗಿ ಪ್ರಯಾಣಿಸು ಮಹಿಳೆಯರು ಬಸ್ ನಿರ್ವಾಹಕರಿಂದ “ಜೀರೋ ದರ” ಟಿಕೆಟ್ ಕೇಳಿ ಪಡೆಯಬೇಕು. ಸರ್ಕಾರ ಈ ಮೊದಲೇ ಹೇಳಿದಂತೆ ಉಚಿತ ಬಸ್ ಯೋಜನೆಯ ಲಾಭ ಪಡೆಯವವರು ಕರ್ನಾಟಕ ರಾಜ್ಯದವರಾಗಿರಬೇಕು. ತಾವು ಇಲ್ಲಿಯವರೇ ಎಂಬುದಕ್ಕೆ ಆಧಾರ್ ಕಾರ್ಡ್ ಸೇರಿದಂತೆ ಇತರೆ ಸಕ್ಷಮ ಗುರುತಿನ ಚಿಟಿ, ದಾಖಲೆಗಳನ್ನು ತೋರಿಸುವದು ಕಡ್ಡಾಯವಾಗಿದೆ. ಇದೆಲ್ಲ ಗೊಂದಲ ಮೂರು ತಿಂಗಳವರೆಗೆ ಮಾತ್ರ. ಏಕೆಂದರೆ, ಸರ್ಕಾರ ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲವಾಗಲೆಂದು ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಕಿದ್ದು, ಅಲ್ಲಿಯವರೆಗೆ ಮಹಿಳೆಯರು ತಮ್ಮ ಗುರುತಿನ ಪತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕು. ಇನ್ನು ಸ್ಮಾರ್ಟ್ ಕಾರ್ಡ್ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ರಾಜ್ಯದ ಬಸ್ ಗಳಲ್ಲಿ ಉಚಿತ ಪ್ರಯಾಣವೆನ್ನುವುದನ್ಬು ಮರೆಯಬಾರದು. ಎಸಿ, ಸ್ಲೀಪರ್, ಐರಾವತ, ವಜ್ರ ಸೇರಿದಂತೆ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ವೇಗದೂತ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರು ಪ್ರಯಾಣಿಸಬಹುದಾಗಿದೆ. ಇನ್ನು ಮಹಿಳೆಯರಿಗೆ ಉಚಿತವಿದೆ ಎಂದು ಬಸ್ ಕಂಡಕ್ಟರ್ ಮೈಮರೆಯುವ ಹಾಗಿಲ್ಲ. ತಿಳಿ ಗುಲಾಬಿ ಬಣ್ಣದ ಶೂನ್ಯ ದರದೊಂದಿಗೆ ಮುದ್ರಿತಗೊಂಡ ಟಿಕೆಟ್ ಅನ್ನು ಹರಿದು ಬಸ್ ನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆಯರಿಗೂ ನೀಡುವುದು ಕಡ್ಡಾಯವಾಗಿದೆ. ಅನಗತ್ಯವಾಗಿ ಮಾತನಾಡುವುದಾಗಲಿ, ಮಹಿಳಾ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದಾಗಲಿ ಬಸ್ ಚಾಲಕರು ಮತ್ತು ನಿರ್ವಾಹಕರು ಮಾಡುವಂತಿಲ್ಲ. ಬಸ್ ನಿಲ್ದಾಣಗಳಲ್ಲಿ ಬಸ್ ಗಳನ್ನು ನಿಲ್ಲಿಸದೇ ಹೊರಟು ಹೋಗುವುದು, ಮಹಿಳೆಯರೆಂದು ಉದಾಸೀನ ತೋರುವುದು, ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ ಅಂತಹ ಸಿಬ್ಬಂದಿ ಮೇಲೆ‌ ಸರ್ಕಾರ ಕೂಡಲೇ ಶಿಸ್ತು ಕ್ರಮ ಜರುಗಿಸಲಿದೆ‌ ಎಂಬುದನ್ನು ಮರೆಯಬಾರದು. ‌ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಸೇರಿದ ಬಸ್ ಗಳಲ್ಲಿ ಇಂದಿನಿಂದ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣವಂತೂ ಖಚಿತ! ಆದರೆ, ಬಸ್ ನ ಒಟ್ಟು ಆಸನಗಳ ಪೈಕಿ ಶೇ.50 ಸೀಟುಗಳನ್ನು ಹಣ ಕೊಟ್ಟು ಪ್ರಯಾಣಿಸುವ ಪುರುಷ ವರ್ಗದವರಿಗೆ ಮೀಸಲಿರಿಸಬೇಕು ಎಂಬುದನ್ನು ನಿರ್ವಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ ಅಂತಾ ಮೂಲಗಳು ತಿಳಿಸಿವೆ.