Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇಂದು ಕಾವೇರಿ ನೀರು ಹಂಚಿಕೆ ವಿಚಾರಣೆ- ರೈತರ ಚಿತ್ತ ಸುಪ್ರೀಂ ಕೋರ್ಟ್‌ ಕಡೆ

ಬೆಂಗಳೂರು:ಕಾವೇರಿ ನೀರು ಹಂಚಿಕೆ ಸಂಬಂಧಿತ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾನೂನು ಸಮರ ನಡೆಯುತ್ತಿದ್ದು ಇಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಮಹತ್ವ ವಿಚಾರಣೆ ಕಾವೇರಿ ಕೊಳ್ಳದ ರೈತರ ಅಳಿವು-ಉಳಿವು ಸುಪ್ರೀಂ ಆದೇಶದ ಮೇಲೆ ನಿಲ್ಲಲಿದೆ.

ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲರ ಮೂಲಕ ರೈತಸಂಘ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಕರ್ನಾಟಕ ಸರ್ಕಾರದ ಅರ್ಜಿ ಜತೆ ರೈತಸಂಘದ ಅರ್ಜಿ ವಿಚಾರಣೆಯೂ ನಡೆಯುವ ಸಾಧ್ಯತೆ ಇದೆ. ಇಂದಿನ ವಿಚಾರಣೆ ಮೇಲೆ ಭಾರೀ ನಿರೀಕ್ಷೆ ಇಟ್ಟಿರುವ ಕಾವೇರಿ ಕೊಳ್ಳದ ಜನರು, ತಮಿಳುನಾಡಿಗೆ ನೀರು ಬಿಡುವುದಕ್ಕೆ ಸುಪ್ರೀಂ ತಡೆ ನೀಡುವ ವಿಶ್ವಾಸದಲ್ಲಿದ್ದಾರೆ.

ಈಗಾಗಲೇ ಮಂಡ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು ತಮಿಳುನಾಡಿಗೆ ನೀರು ಬಿಡ್ತಿರೋದಕ್ಕೆ ಅನ್ನದಾತರು ಸಿಡಿದೆದ್ದಿದ್ದಾರೆ. ಇಂದು ರೈತರ ಪ್ರತಿಭಟನೆ ಮುಂದುವರೆಯಲಿದ್ದು ನಾನಾ ಸಂಘಟನೆಗಳು ವಿನೂತನವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.

ರಾಜ್ಯ ಸರ್ಕಾರ ವಿರೋಧದ ನಡುವೆಯೂ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಡುತ್ತಿದೆ. ಕಳೆದ 7 ದಿನಗಳಿಂದ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಸರ್ಕಾರ ಹರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಮಿಳುನಾಡು ಸರ್ಕಾರ ನ್ಯಾಯಾಲಯದ ಬಳಿ, ಜೂನ್, ಜುಲೈ, ಆಗಸ್ಟ್ ತಿಂಗಳ ನೀರು ಕೊಡಿಸಬೇಕು ಎಂದು ಕೇಳಿಕೊಂಡಿದೆ. ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕ 80 ಟಿಎಂಸಿ ನೀರು ಕೊಡಬೇಕು. ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ. ಮೆಟ್ಟೂರು ಡ್ಯಾಂ ವ್ಯಾಪ್ತಿ ಕೃಷಿ ಜಮೀನಿಗೆ ನೀರು ಅಗತ್ಯ. ಸದ್ಯ ಕರ್ನಾಟಕ ಬಿಡುತ್ತಿರುವ ನೀರು ಸಾಲುತ್ತಿಲ್ಲ. ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸುವಂತೆ ಅರ್ಜಿ ಸಲ್ಲಿಸಿದೆ.

ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಸರ್ಕಾರ ತನ್ನ ಅರ್ಜಿಯಲ್ಲಿ, “ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ರಾಜ್ಯದ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಂಗ್ರಹ ಇರುವ ನೀರು ಕುಡಿಯಲು ಸಾಲದು. ಕೆ.ಆರ್.ಎಸ್, ಕಬಿನಿ, ಹೇಮಾವತಿ, ಹಾರಂಗಿ ಡ್ಯಾಂನಲ್ಲಿ ನೀರಿನ ಅಭಾವ ಎದುರಾಗುತ್ತಿದೆ. ಹೀಗಾಗಲೇ ನಾವು ಕಾವೇರಿ ಪ್ರಾಧಿಕಾರ ಹೇಳಿದಷ್ಟು ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ನಮ್ಮ ಡ್ಯಾಂನಲ್ಲಿ ನೀರು ಸಂಗ್ರಹ ಕಡಿಮೆ ಇದ್ದರೂ 3 ತಿಂಗಳಲ್ಲಿ ತಮಿಳುನಾಡಿಗೆ 35 ಟಿಎಂಸಿ ನೀರು ಬಿಟ್ಟಿದ್ದೇವೆ. ತಮಿಳುನಾಡು ಕೇಳಿದಷ್ಟು ನೀರು ಬಿಡಲು ನಮ್ಮ ಮೂರು ಡ್ಯಾಂಗಳಲ್ಲೂ ನೀರು ಇಲ್ಲ. ತಮಿಳುನಾಡು ಕೃಷಿಗೆ ನೀರು ಕೇಳುತ್ತಿದೆ, ನಮಗೆ ಕುಡಿಯೋದಕ್ಕೆ ನೀರಿಲ್ಲ. ಇರುವ ನೀರು ಕೊಟ್ಟರೆ ನಮಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತೆ” ಎಂದು ವಾದ ಮಂಡಿಸಿದೆ.