ಈಜಿಪ್ಟ್ ಸಮುದ್ರದಲ್ಲಿ ದೈತ್ಯ ಶಾರ್ಕ್ ದಾಳಿಗೆ ಬಲಿಯಾದ ಯುವಕ
ಸಮುದ್ರದಲ್ಲಿ ಈಜಾಡುವುದು, ಆಟವಾಡುವುದು ರೋಮಾಂಚನಕಾರಿಯಾಗಿದೆ. ಆದರೆ ಇದು ಕೆಲವೊಮ್ಮೆ ಅಪಾಯಕಾರಿಯೂ ಆಗಿರಬಹುದು. ಸಮುದ್ರದಲ್ಲಿ ಕಂಡುಬರುವ ಅಪಾಯಕಾರಿ ಜೀವಿಗಳು ಕೆಲವೊಮ್ಮೆ ಜನರ ಜೀವವನ್ನೇ ತೆಗೆದುಬಿಡುತ್ತದೆ. ಇದೇ ರೀತಿಯ ಪ್ರಕರಣವೊಂದು ಇತ್ತೀಚಿಗೆ ಈಜಿಪ್ಟ್ ನಲ್ಲಿ ನಡೆದಿದೆ. ಈ ಘಟನೆಯ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಈಜಿಪ್ಟ್‌ನ ಹುರ್ಘಡಾದ ಸಮುದ್ರದಲ್ಲಿ ಯುವಕನೊಬ್ಬ ಈಜಾಡುತ್ತಿರುವ ವೇಳೆ ದೈತ್ಯ ಶಾರ್ಕ್ ಆತನ ಮೇಲೆ ದಾಳಿ ಮಾಡಿದೆ. ಆತನ ರಕ್ಷಣೆಗೆಂದು ಬೋಟ್ ಮೂಲಕ ರಕ್ಷಣಾಗಾರರು ಹೋಗುವಷ್ಟರಲ್ಲಿ ಶಾರ್ಕ್ ಆತನ ಪ್ರಾಣವನ್ನೇ ತೆಗೆದುಬಿಟ್ಟಿತ್ತು. 23 ವರ್ಷ ವಯಸ್ಸಿನ ವ್ಲಾದಿಮಿರ್ ಪೊಪೊವ್ ಶಾರ್ಕ್ ದಾಳಿಗೆ ಬಲಿಯಾದ ಯುವಕ. ಈ ಭೀಕರ ದಾಳಿಯನ್ನು ಆ ವ್ಯಕ್ತಿಯ ತಂದೆ ಕಣ್ಣಾರೆ ಕಂಡಿದ್ದಾರೆ. ನಾವು ವಿಶ್ರಾಂತಿ ಪಡೆಯಲೆಂದು ಬೀಚ್ಗೆ ಹೋಗಿದ್ದೆವು. ನನ್ನ ಮಗನ ಮೇಲೆ ಶಾರ್ಕ್ ಮೀನು ದಾಳಿ ಮಾಡಿತು. ಇದೆಲ್ಲಾ ಕೇವಲ ಸೆಕೆಂಡುಗಳಲ್ಲಿ ಸಂಭವಿಸಿತು, ನಮ್ಮ ಕೈಯಲ್ಲಿ ಆತನ ಪ್ರಾಣ ರಕ್ಷಣೆ ಮಾಡಲಾಗಿಲ್ಲ ಎಂದು ಮರುಕ ವ್ಯಕ್ತಪಡಿಸಿದ್ದಾರೆ. ಸಮುದ್ರದ ಮಧ್ಯೆ ವ್ಯಕ್ತಿಯು ಈಜಾಡುತ್ತಿದ್ದಾಗ ಶಾರ್ಕ್ ಆತನ ಮೇಲೆ ಹಠಾತ್ತನೆ ದಾಳಿ ಮಾಡುತ್ತದೆ. ತಕ್ಷಣ ಆತ ಜೀವವನ್ನು ಉಳಿಸಲು ಸಹಾಯ ಕೇಳುತ್ತಾನೆ, ಹೇಗಾದರೂ ಈಜಿಕೊಂಡು ದಡ ಸೇರಬೇಕು ಎಂದುಕೊಳ್ಳುತ್ತಾನೆ. ಆದರೆ ಬಲಶಾಲಿ ಶಾರ್ಕ್ ಅಷ್ಟರಲ್ಲಿ ಆತನನ್ನು ಎಳೆದು ತಿಂದೇ ಬಿಡುತ್ತದೆ. ಆ ವ್ಯಕ್ತಿಯ ರಕ್ಷಣೆಗೆಂದು ಬೋಟ್ ನಲ್ಲಿ ರಕ್ಷಣಾಗಾರರು ಹೋಗುವಷ್ಟರಲ್ಲಿ ಶಾರ್ಕ್ ಆ ಮನುಷ್ಯನ ಪ್ರಾಣವನ್ನೇ ತೆಗೆದುಬಿಟ್ಟಿತ್ತು. ಅಲ್ಲೇ ಅಕ್ಕಪಕ್ಕದಲ್ಲಿ ನಿಂತಿದ್ದ ಜನರು ಈ ಭಯಾನಕ ದೃಶ್ಯವನ್ನು ವೀಕ್ಷಿಸುತ್ತಾ ಚೀರಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.