ಉಗ್ರರ ಗುಂಡಿಗೆ ನಿವೃತ್ತ ಪೊಲೀಸ್ ಅಧಿಕಾರಿ ಬಲಿ
ಶ್ರೀನಗರ:ಉಗ್ರರ ಗುಂಡೇಟಿಗೆ ನಿವೃತ್ತ ಅಧಿಕಾರಿಯೊಬ್ಬರು ಬಲಿಯಾಗಿರುವ ಘಟನೆ ಶ್ರೀನಗರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ನಿವೃತ್ತ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶಫಿ ಮಿರ್ ಎಂಬವರು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ನಿವೃತ್ತ ಅಧಿಕಾರಿಯಾಗಿದ್ದಾರೆ.
ಮೊಹಮ್ಮದ್ ಶಫಿ ಮಿರ್ ಅವರು ನಗರದ ಶಿರಿ ಬಾರಾಮುಲ್ಲಾದ ಗಂಟಮುಲ್ಲಾ ಬಾಲಾ ಪ್ರದೇಶದ ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸದ್ಯ ಪ್ರದೇಶವನ್ನು ಸೇನೆ ಸುತ್ತುವರೆದಿದ್ದು,ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ” ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಕಳೆದ ತಿಂಗಳು ಶ್ರೀನಗರದ ಈದ್ಗಾ ಮಸೀದಿ ಬಳಿ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಪೊಲೀಸ್ ಇನ್ಸ್ಪೆಕ್ಟರ್ ಮಸ್ರೂರ್ ಅಹ್ಮದ್ ವಾನಿ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆಯ ನಂತರ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀನಗರದ ಈದ್ಗಾ ಮೈದಾನದಲ್ಲಿ ಇನ್ಸ್ಪೆಕ್ಟರ್ ಸ್ಥಳೀಯ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಈ ಘಟನೆ ನಡೆದಿತ್ತು.