ಉನ್ನತ ವ್ಯಾಸಂಗಕ್ಕಾಗಿ ಇಟಲಿ ತೆರಲಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ
ರೋಮ್: ಉನ್ನತ ವ್ಯಾಸಂಗಕ್ಕಾಗಿ ತೆರಳಿದ್ದ ಭಾರತೀಯ ವಿದ್ಯಾರ್ಥಿಯೊಬ್ಬ ಇಟಲಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿ ಶವವಾಗಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಮೃತ ಯುವಕನನ್ನು ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ನಿವಾಸಿ ರಾಮ್ ರಾವತ್ ಎಂದು ಗುರುತಿಸಲಾಗಿದೆ.
ರಾಮ್ ರಾವತ್ ಎಂಬಿಎ ಓದಲೆಂದು ಇಟಲಿಗೆ ಹೋಗಿದ್ದು, ಅಲ್ಲಿ ಅವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ರಾವತ್ ಅವರು ಕರೆ ಸ್ವೀಕರಿಸದಿದ್ದಾಗ ಸಂಶಯಗೊಂಡ ಪೋಷಕರು ವಸತಿಗೃಹದ ಮಾಲೀಕರನ್ನು ಸಂಪರ್ಕಿಸಿದರು. ಈ ವೇಳೆ ಅವರು ಮತ್ತೊಂದು ಮನೆಯ ವಾಶ್ ರೂಂನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇನ್ನು ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಆತನ ಮೃತದೇಹವನ್ನು ಭಾರತಕ್ಕೆ ಕರೆತರಲು ಜಾರ್ಖಂಡ್ನ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ಸಿಂಗ್ಭೂಮ್ನ ಡೆಪ್ಯೂಟಿ ಕಮಿಷನರ್ ಅನನ್ಯ ಮಿತ್ತಲ್ ಅವರು, ರಾಮ್ ರಾವತ್ ಸಾವಿನ ಬಗ್ಗೆ ನನಗೆ ಮಾಹಿತಿ ಬಂದಿದೆ. ಹೆಚ್ಚಿನ ತನಿಖೆಗಾಗಿ ಗೃಹ ಇಲಾಖೆ ಮತ್ತು ಜಾರ್ಖಂಡ್ನ ವಲಸೆ ಸೆಲ್ಗೆ ತಿಳಿಸಲಾಗಿದೆ. ಮೃತ ರಾಮ್ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ತಿಳಿಸಿದ್ದಾರೆ.