Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಉಳ್ಳಾಲ: ಕಡಿಮೆ ಅಂಕ ಕೊಟ್ಟ ಶಿಕ್ಷಕಿಯ ನೀರಿನ ಬಾಟಲ್‌ನಲ್ಲಿ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು – ಇಬ್ಬರು ಶಿಕ್ಷಕಿಯರು ಅಸ್ವಸ್ಥ

ಮಂಗಳೂರು: ಅಕ್ಟೋಬರ್ 6 ಗಣಿತ ಪರೀಕ್ಷೆಯಲ್ಲಿ‌ ಕಳಪೆ ಫಲಿತಾಂಶ ಪಡೆದಿದ್ದ‌ ಆರನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಸಹಪಾಠಿಯೊಂದಿಗೆ ಸೇರಿ ಪೇಪರ್ ತಿದ್ದಿದ್ದ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮುಗಿದಿದ್ದ ಮಾತ್ರೆಗಳನ್ನ ಹಾಕಿ ಸೇಡು ತೀರಿಸಿದ್ದರ ಪರಿಣಾಮ ನೀರನ್ನ ಕುಡಿದಿದ್ದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಉಳ್ಳಾಲ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದ್ದು ಘಟನೆಗೆ ಕಾರಣರಾದ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾಡಳಿತ ಮಂಡಳಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಶಾಲಾ ಯುನಿಟ್ ಟೆಸ್ಟ್‌ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಪೇಪರ್ ತಿದ್ದಿದ್ದ ಗಣಿತ ಶಿಕ್ಷಕಿ ಸರಿಯಿದ್ದ ಉತ್ತರಕ್ಕೆ ತಪ್ಪು ಹಾಕಿದ್ದಾರೆ ಅನ್ನುವ ಬಾವನೆ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು. ಶಿಕ್ಷಕಿಯ ವಿರುದ್ಧ ಸೇಡು ತೀರಿಸಲು ತನ್ನ ಸಹಪಾಠಿಯ ಸಹಾಯ ಪಡೆದುಕೊಂಡ ವಿದ್ಯಾರ್ಥಿನಿ ಸ್ಟಾಫ್ ರೂಮ್‌ನಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡು ತಾನು ತಂದಿದ್ದ ಅವಧಿ ಮೀರಿದ್ದ ಮಾತ್ರೆಗಳನ್ನ ಗಣಿತ ಶಿಕ್ಷಕಿ ಬಳಸುತ್ತಿದ್ದ ನೀರಿನ ಬಾಟಲಿಗೆ ಹಾಕಿದ್ದಾಳೆ. ಗಣಿತ ಶಿಕ್ಷಕಿಯು ಬಾಟಲಿ ನೀರನ್ನು‌ ಕುಡಿದು ಅಸ್ವಸ್ಥಗೊಂಡಿದ್ದು,ಅದೇ ನೀರನ್ನ ಸೇವಿಸಿದ್ದ ಮತ್ತೋರ್ವ ಶಿಕ್ಷಕಿಯ ಮುಖ ಊದಿ ಕೊಂಡಿದೆ.ಅನುಮಾನಗೊಂಡ ಶಿಕ್ಷಕರು ನೀರಿನ ಬಾಟಲಿಯನ್ನ ಪರಿಶೀಲಿಸಿದಾಗ ನೀರಿನಲ್ಲಿ ಮಾತ್ರೆಗಳು ಕರಗಿರುವುದನ್ನ ಗಮನಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ವಿದ್ಯಾರ್ಥಿನಿಯರ ಕುಕೃತ್ಯ ಬೆಳಕಿಗೆ ಬಂದಿದೆ. ಪ್ರಾಥಮಿಕ ಶಿಕ್ಷಣದಲ್ಲೇ ಕ್ರೌರ್ಯ ತೋರಿದ ವಿದ್ಯಾರ್ಥಿನಿಯರ ನಡೆಗೆ ಶಾಲಾ ರಕ್ಷಕ-ಶಿಕ್ಷಕರು ನಿಬ್ಬೆರಗಾಗಿದ್ದಾರೆ‌. ವಿದ್ಯಾ ಸಂಸ್ಥೆಗಳು ಶಿಕ್ಷಣವನ್ನು ವ್ಯಾವಹಾರಿಕವಲ್ಲದೆ ಸ್ಪರ್ಧಾತ್ಮಕವಾಗಿ ನಡೆಸುವುದಲ್ಲದೆ ಪೋಷಕರು ಮಕ್ಕಳನ್ನ ರ್ಯಾಂಕ್ ಮೆಷಿನ್‌ಗಳನ್ನಾಗಿಸುವುದರ ಪರಿಣಾಮ ಇಂತಹ ಕೃತ್ಯಗಳನ್ನ ವಿದ್ಯಾರ್ಥಿಗಳು ನಡೆಸಿತ್ತಿದ್ದಾರೋ ಎಂದು ಕಳವಳ ಉಂಟಾಗಿದೆ. ಕೃತ್ಯವೆಸಗಿದ ವಿದ್ಯಾರ್ಥಿನಿಯರನ್ನು ಶಾಲಾಡಳಿತವು ತರಾತುರಿಯಲ್ಲಿ ಟಿ.ಸಿ ಕೊಟ್ಟು ಡಿಬಾರ್ ಮಾಡಲು ಮುಂದಾಗಿದ್ದು ಆ ಮೂಲಕ ಶಾಲೆಯ ಮಾನ ಕಾಪಾಡಲು ಹೊರಟಿದೆ.