ಋತುಸ್ರಾವ ಅಂಗವಿಕಲತೆಯಲ್ಲ, ವೇತನ ಸಹಿತ ರಜೆ ಅಗತ್ಯವಿಲ್ಲ: ಸಚಿವೆ ಸ್ಮತಿ ಇರಾನಿ
ಹೊಸದಿಲ್ಲಿ:“ಋತುಸ್ರಾವದ ಮಹಿಳೆಯಾಗಿ, ಋತುಚಕ್ರವು ಅಂಗವಿಕಲತೆ ಅಲ್ಲ, ಇದು ಮಹಿಳೆಯರ ಜೀವನ ಪ್ರಯಾಣದ ನೈಸರ್ಗಿಕ ಭಾಗವಾಗಿದೆ” ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿಯವರು ಹೇಳಿದರು.
ಬುಧವಾರ ರಾಜ್ಯಸಭೆಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ವೇತನ ಸಹಿತ ಮುಟ್ಟಿನ ರಜೆಯ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ಮನೋಜ್ ಕುಮಾರ್ ಝಾ ಪ್ರಶ್ನೆಗೆ ಉತ್ತರಿಸಿದ ಅವರು ಮಹಿಳೆಯರಿಗೆ ಮುಟ್ಟು ಎನ್ನುವುದು ಜೀವನದ ನೈಸರ್ಗಿಕ ಭಾಗವಾಗಿದ್ದು,ಅದನ್ನು ವಿಶೇಷ ರಜೆ ನಿಬಂಧನೆಗಳ ಅಗತ್ಯವಿರುವ ಅಂಗವಿಕಲತೆ ಎಂದು ಪರಿಗಣಿಸಬಾರದು ಎಂದರು.
ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕರಡು ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ಘೋಷಿಸಿದರು.
ದೇಶದಾದ್ಯಂತ ಸರಿಯಾದ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಬಗ್ಗೆ ಜಾಗೃತಿ ನೀಡುವ ಗುರಿಯನ್ನು ಈ ನೀತಿ ಹೊಂದಿದೆ ಎಂದರು.
ಋತುಚಕ್ರದ ರಜೆಯ ವಿಷಯವು ಚರ್ಚೆಯ ವಿಚಾರವಾಗಿದೆ.
ಸ್ಪೇನ್ ಇತ್ತೀಚೆಗೆ ಶಾಸನವನ್ನು ಅಂಗೀಕರಿಸಿದ್ದು ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡಲು ಅನುಮತಿ ನೀಡಿದ್ದನ್ನು ಈ ಸಂದರ್ಭ ನಾವು ಸ್ಮರಿಸಬಹುದಾಗಿದೆ.