Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಎಲ್‍ಐಸಿ ಏಜೆಂಟರು, ನೌಕರರಿಗೆ ವಿವಿಧ ಸೌಲಭ್ಯ ಪ್ರಕಟಿಸಿದ ಮೋದಿ- ನಳಿನ್‍ಕುಮಾರ್ ಶ್ಲಾಘನೆ

ಬೆಂಗಳೂರು: ಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಭಾರತೀಯ ಜೀವವಿಮಾ ನಿಗಮದ (ಎಲ್‍ಐಸಿ) ಏಜೆಂಟರು ಮತ್ತು ಉದ್ಯೋಗಿಗಳಿಗೆ ವಿವಿಧ ಸೌಲಭ್ಯಗಳನ್ನು ಪ್ರಕಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರದ ಬಿಜೆಪಿ ಸರಕಾರದ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸಂತಸ ಸೂಚಿಸಿದ್ದಾರೆ.

ಪ್ರಧಾನಿಯವರು ಮತ್ತು ಸಚಿವಸಂಪುಟಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ.ಕೌಟುಂಬಿಕ ಪಿಂಚಣಿ ಹೆಚ್ಚಳ, ಏಜೆಂಟರ ಗ್ರಾಚ್ಯುಟಿ ಮಿತಿ ಏರಿಕೆ, ಮರುನೇಮಕಗೊಂಡ ಏಜೆಂಟರ ರಿನೀವಲ್ ಕಮಿಷನ್ ನೀಡುವ ನಿರ್ಧಾರ ಮಾಡಲಾಗಿದೆ. ಇದು ಎಲ್‍ಐಸಿಯಲ್ಲಿ ಕೆಲಸ ಮಾಡುವ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 13 ಲಕ್ಷಕ್ಕೂ ಹೆಚ್ಚು ಏಜೆಂಟರಿಗೆ ಪ್ರಯೋಜನ ಕೊಡಲಿದೆ ಎಂದು ಅವರು ತಿಳಿಸಿದ್ದಾರೆ.

ಏಜೆಂಟರ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದ್ದಾರೆ. ಇದರಿಂದ 13 ಲಕ್ಷಕ್ಕೂ ಹೆಚ್ಚು ಏಜೆಂಟರಿಗೆ ಪ್ರಯೋಜನ ಸಿಗಲಿದೆ. ಮರುನೇಮಕಗೊಂಡ ಏಜೆಂಟರಿಗೆ ಹಿಂದೆ ರಿನಿವಲ್ ಕಮಿಷನ್ ಸಿಗುತ್ತಿರಲಿಲ್ಲ. ಇದೀಗ ಈ ಸೌಲಭ್ಯ ಕಲ್ಪಿಸಲಾಗಿದೆ. ಏಜೆಂಟರ ಟರ್ಮ್ ಇನ್‍ಶೂರೆನ್ಸ್ ಕವರ್ ಸೌಲಭ್ಯದಲ್ಲೂ ಬದಲಾವಣೆ ಮಾಡಲಾಗಿದೆ.
ಉದ್ಯೋಗಿಗಳ ಕುಟುಂಬಗಳ ಯೋಗಕ್ಷೇಮವನ್ನು ಗಮನದಲ್ಲಿ ಇಟ್ಟುಕೊಂಡು ಕುಟುಂಬ ಪಿಂಚಣಿ ಪ್ರಮಾಣದ ಬದಲಾವಣೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

ಎಲ್‍ಐಸಿಗೆ ಸಂಬಂಧಿಸಿದ ಈ ಉತ್ತಮ ಕ್ರಮಗಳಿಂದ ಉದ್ಯೋಗಿಗಳು ಮತ್ತು ಏಜೆಂಟರು ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಣೆ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.