Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಏನಿದು ಅಡ್ವಾನ್ಸ್ ಟ್ಯಾಕ್ಸ್? 2ನೇ ಕಂತಿಗೆ ಇಂದೇ ಕೊನೆ ದಿನ.!

ನವದೆಹಲಿ:ಪ್ರಸಕ್ತ ಹಣಕಾಸು ವರ್ಷಕ್ಕೆ ಎರಡನೇ ಕಂತಿನ ಮುಂಗಡ ತೆರಿಗೆ ಪಾವತಿಸಲು ಇಂದು ಕೊನೆಯ ದಿನ. ಇದು 2023-24ರ ಹಣಕಾಸು ವರ್ಷ ಅಥವಾ 2024-25ರ ಅಸೆಸ್ಮೆಂಟ್ ವರ್ಷದಲ್ಲಿ ಕಟ್ಟಬೇಕಿರುವ ಮುಂಗಡ ತೆರಿಗೆ ಬಾಬ್ತು 10,000 ರುಪಾಯಿಗೂ ಹೆಚ್ಚಿದ್ದಲ್ಲಿ, ಅಂಥವರು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕು.

ಮುಂಗಡವಾಗಿ ಕಟ್ಟಬೇಕಿರುವ ತೆರಿಗೆಯನ್ನು ನಾಲ್ಕು ಕಂತುಗಳಲ್ಲಿ ಪಾವತಿಸಬಹುದು. ಜೂನ್ 15ರವರೆಗೆ ಮೊದಲ ಕಂತನ್ನು ಕಟ್ಟಲು ಅವಕಾಶ ನೀಡಲಾಗಿತ್ತು. ಡಿಸೆಂಬರ್ 15ಕ್ಕೆ ಮತ್ತು 2024ರ ಮಾರ್ಚ್ 15ಕ್ಕೆ ಮೂರನೇ ಹಾಗೂ ನಾಲ್ಕನೇ ಕಂತಿನ ಅಡ್ವಾನ್ಸ್ ಟ್ಯಾಕ್ಸ್ ಕಟ್ಟಲು ಡೆಡ್​ಲೈನ್ ಆಗಿದೆ.ನೀವು ಕಟ್ಟಬೇಕಿರುವ ತೆರಿಗೆ ಮೊತ್ತದ ಶೇ. 15ರಷ್ಟು ಮೊತ್ತವನ್ನು ಮೊದಲ ಕಂತಿನಲ್ಲಿ ಪಾವತಿಸಬೇಕು. ಎರಡನೇ ಕಂತಿನಲ್ಲಿ, ಉಳಿದ ತೆರಿಗೆ ಬಾಕಿಯ ಶೇ. 45ರಷ್ಟು ಮೊತ್ತವನ್ನು ಪಾವತಿಸಬೇಕು. ಅದಾದ ಬಳಿಕ ಉಳಿದ ಮೊತ್ತದಲ್ಲಿ ಶೇ. 75ರಷ್ಟನ್ನು ಮೂರನೇ ಕಂತಿನಲ್ಲಿ ಪಾವತಿಸಬೇಕು. ಹಣಕಾಸು ವರ್ಷದ ಕೊನೆಯ ತಿಂಗಳಿನಲ್ಲಿ ಎಲ್ಲಾ ಬಾಕಿ ತೆರಿಗೆ ಹಣವನ್ನು ಪಾವತಿಸಬೇಕಾಗುತ್ತದೆ.

ನಮ್ಮ ಆದಾಯ ತೆರಿಗೆಯನ್ನು ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯಲ್ಲಿ ಕಟ್ಟುತ್ತೇವೆ. ಆದರೆ, 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 208ರ ಪ್ರಕಾರ ಯಾರು ಒಂದು ವರ್ಷದಲ್ಲಿ 10,000 ರೂಗಿಂತ ಹೆಚ್ಚು ಮೊತ್ತದ ತೆರಿಗೆ ಕಟ್ಟಬೇಕಿರುತ್ತದೋ ಅವರು ಮುಂಗಡವಾಗಿ ತೆರಿಗೆ ಪಾವತಿಸಬೇಕು. ಅದೇ ಅಡ್ವಾನ್ಸ್ ಟ್ಯಾಕ್ಸ್. ಸಂಬಳದ ಆದಾಯ ಇರುವ ಉದ್ಯೋಗಿಗಳು, ಸ್ವಂತ ಉದ್ಯೋಗ ಹೊಂದಿರುವ ವ್ಯಕ್ತಿಗಳು, ಉದ್ದಿಮೆಗಳು, ಟ್ರಸ್ಟ್​​ಗಳು ಮತ್ತು ಪಾಲುದಾರಿಕೆ ವ್ಯವಹಾರಗಳು ಮುಂಗಡ ತೆರಿಗೆ ಪಾವತಿಸುವ ಅವಶ್ಯಕತೆ ಇರುತ್ತದೆ.

ಐಟಿ ಕಾಯ್ದೆ ಸೆಕ್ಷನ್ 44ಎಡಿ ಅಥವಾ 44ಎಡಿಎ ಅಡಿಯಲ್ಲಿ ಪ್ರಿಸಂಪ್ಟಿವ್ ಟ್ಯಾಕ್ಸೇಶನ್ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡಿರುವವರು ಮಾರ್ಚ್ 15ರೊಳಗೆ ಯಾವುದೇ ದಿನದಲ್ಲಾದರೂ ಇಡೀ ಮುಂಗಡ ತೆರಿಗೆ ಮೊತ್ತವನ್ನೇ ಒಂದೇ ಕಂತಿನಲ್ಲಿ ಪಾವತಿಸಬೇಕು.

ವೃತ್ತಿಪರ ಕೆಲಸ ಅಥವಾ ವ್ಯವಹಾರಗಳಿಂದ ಯಾವುದೇ ಆದಾಯ ಹೊಂದಿಲ್ಲದ, 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕಾದ ಅವಶ್ಯಕತೆ ಇರುವುದಿಲ್ಲ.ಒಂದು ವೇಳೆ ಮುಂಗಡ ತೆರಿಗೆ ಕಟ್ಟಬೇಕಾದ ವ್ಯಕ್ತಿಗಳು ನಿಗದಿತ ದಿನದೊಳಗೆ ಕಂತು ಕಟ್ಟಲಿಲ್ಲವೆಂದರೆ 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234ಬಿ ಮತ್ತು 234ಸಿ ಅಡಿಯಲ್ಲಿ, ಬಾಕಿ ಇರುವ ತೆರಿಗೆ ಮೊತ್ತದ ಮೇಲೆ ಶೇ. 1ರಷ್ಟು ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ.