ಕಟೀಲು ಯಕ್ಷಗಾನ ಮೇಳಗಳಿಗೆ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನಕ್ಕೆ ಹೈಕೋರ್ಟ್ ಅಸ್ತು
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ಯಕ್ಷಗಾನ ಮೇಳಗಳಿಗೆ ಕೊರೊನಾಕ್ಕಿಂತ ಮೊದಲು ಇದ್ದ ರೀತಿಯಲ್ಲೇ ಪ್ರದರ್ಶನ ನಡೆಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಯಕ್ಷಗಾನ ಪ್ರದರ್ಶನಕ್ಕೆ ಶಬ್ದ ಮಿತಿಯನ್ನು ಹೇರಿ ರಾತ್ರಿ 12.30ರ ವರೆಗೆ ಮಾತ್ರ ಯಕ್ಷಗಾನ ನಡೆಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಆದೇಶಿಸಿದ್ದು, ಈ ಆದೇಶವನ್ನು ಶ್ರೀ ಕ್ಷೇತ್ರ ಕಟೀಲಿನ ಭಕ್ತರೊಬ್ಬರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಯಕ್ಷಗಾನ ಪ್ರದರ್ಶನ ಬೆಳಗ್ಗಿನ ವರೆಗೆ ನಡೆಯಬೇಕೇ ಹೊರತು ರಾತ್ರಿ 12.30ರ ಒಳಗೆ ಕೊನೆಗೊಳಿಸುವುದು ಅಸಾಧ್ಯವೆಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ ಗೆ ಮನದಟ್ಟು ಮಾಡಿದ್ದರು. ಅದರಂತೆ ಕೋರ್ಟ್ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.