Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕಾಂಗ್ರೆಸ್ ಸರ್ಕಾರ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿದೆ’ – ಜೋಶಿ ಆಕ್ರೋಶ

ನವದೆಹಲಿ: ರಾಜ್ಯ ಕಾಂಗ್ರೆಸ್ ಸರ್ಕಾರ I.N.D.I. A. ಮೈತ್ರಿ ಕೂಟ ಗಟ್ಟಿಗೊಳಿಸಿಕೊಳ್ಳಲು  ತಮಿಳುನಾಡಿಗೆ ನೀರು ಹರಿಸಿದೆ ಎಂದುಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ಆದರೆ ರಾಜ್ಯ ಸರ್ಕಾರ ಮೊದಲು ನೀರು ಹರಿಸಿ ಈಗ ಬಂದು ಸಭೆ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮೈತ್ರಿಕೂಟ ಗಟ್ಟಿಗೊಳಿಸಲು ತಮಿಳುನಾಡಿಗೆ ನೀರು ಹರಿಸಿ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಇದು ಸರಿಯಲ್ಲ, ಹೀಗಾಗಬಾರದು ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದ ಸಭೆಯಲ್ಲೇ ಹೇಳಿದ್ದೇನೆ. ನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ..? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ‌? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ನೇರವಾಗಿ ಹೇಳಿದ್ದೇನೆ ಎಂದು ಪ್ರಲ್ಹಾದ ಜೋಶಿಯವರು ಹೇಳಿದರು.

ಕಾನೂನಾತ್ಮಕ ವಿಚಾರಗಳ ಬಗ್ಗೆಯೂ ಮಾತನಾಡಿದ ಅವರು, ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮಲ್ಲಿ ನೀರು ಇಲ್ಲ ಎಂದು ಅಫಿಡವಿಟ್ ಹಾಕ್ತಾರೆ. ಮತ್ತೆ ಅತ್ತ ಯಾವುದೋ ಒತ್ತಡದಲ್ಲಿ ತಮಿಳುನಾಡಿಗೆ ನೀರು ಹರಿಸ್ತಾರೆ. ತಮಿಳುನಾಡಿಗೆ ನೀರು ಹರಿಸುವ ಮೊದಲು ಮೀಟಿಂಗ್ ಮಾಡಬೇಕಿತ್ತು, ಚರ್ಚೆ ಮಾಡಬೇಕಿತ್ತು. ಕರ್ನಾಟಕದ ಹಿತ ಕಾಪಾಡಲು ನಾವು ಬದ್ಧರಾಗಿದ್ದೇವೆ. ನಿನ್ನೆ ಡಿಕೆಶಿ ನನ್ನನ್ನು ಭೇಟಿಯಾಗಿದ್ದಾರೆ ಎಂದರು.

ಇದರಲ್ಲಿ ಕೇವಲ ರಾಜಕೀಯಕ್ಕೋಸ್ಕರ ಪ್ರಧಾನಮಂತ್ರಿ ಜೊತೆ ಮಾತಾಡ್ತಿವಿ ಅಂತ ಹೇಳೋಕೆ ಆಗಲ್ಲ. ತಮಿಳುನಾಡು ಸಿಎಂ ಅವರನ್ನು ತಬ್ಬಿಕೊಂಡು ಸಭೆ ಮಾಡಿದವರು ಯಾರು..? ಆಗ ಕೇಳದವರು ಈಗ ಕೇಂದ್ರವನ್ನು ಕೇಳ್ತಿದ್ದಾರೆ‌ . ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಲ್ಹಾದ ಜೋಶಿಯವರು ತೀವ್ರ ವಾಗ್ದಾಳಿ ನಡೆಸಿದರು.