Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾಂಗ್ರೆಸ್ 80% ಸರ್ಕಾರ ಸಾಬೀತು: ಸಿಎಂ,ಡಿಸಿಎಂ ರಾಜೀನಾಮೆ ನೀಡಲು ಕಟೀಲ್ ಆಗ್ರಹ

ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ 80% ಕಮಿಷನ್ ಸರ್ಕಾರವೆಂದು ಸಾಬೀತು ಆಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಮಂಗಳೂರು ಉತ್ತರ ಮಂಡಲದ ವತಿಯಿಂದ ಕಾಂಗ್ರೆಸ್ ಭೃಷ್ಟಾಚಾರದ ವಿರುದ್ದ ಕಾವೂರು ಜಂಕ್ಷನ್‍ನಲ್ಲಿ ಮಂಗಳವಾರ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯದ ಕಾಂಗ್ರೆಸ್ ಕಾರ್ಪೋರೇಟರ್ ಮನೆಯಲ್ಲಿ ದೊರಕಿದ ಹಣ ಲಂಚಾವತಾರದ ಹಣವಾಗಿದೆ. ಗುತ್ತಿಗೆದಾರರ 600 ಕೋಟಿಯನ್ನು ಕಮೀಷನ್ ಆಧಾರದಲ್ಲಿ ಬಿಡುಗಡೆ ಮಾಡಿ ಆ ಹಣ ಐಟಿ ದಾಳಿಯಲ್ಲಿ ಸಿಕ್ಕಿದೆ ಇದಕ್ಕೆ ಪುರಾವೆಯೂ ಇದ್ದು ಕಾಂಗ್ರೆಸ್ ನಾಯಕರಿಗೆ ಮತ್ತೆ ತಿಹಾರ್ ಜೈಲ್ ಕೋಣೆ ಸಿದ್ದವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನುಡಿದರು.
ಹಿಂದೆ ನಮ್ಮ ಸರಕಾರಕ್ಕೆ ಪೇ ಸಿಎಂ, 40 ಪರ್ಸೆಂಟ್ ಸರಕಾರ ಎಂದು ಸುಳ್ಳು ಆರೋಪ ಮಾಡಿದರು. ಸಾಕ್ಷ್ಯ ನೀಡಿ ಎಂದರೆ ಅದೂ ಇರಲಿಲ್ಲ. 4 ತಿಂಗಳಲ್ಲಿ ಸಾಕ್ಷ್ಯ ಇಲ್ಲದೆ ಯಾವುದೇ ಮಂತ್ರಿಯನ್ನು ಜೈಲಿಗೆ ಕಳಿಸಲು ವಿಫಲರಾದರು.ಇದೀಗ ಕಾಂಗ್ರೆಸ್ ಸರಕಾರವೇ 80 ಪರ್ಸೆಂಟ್ ಸರಕಾರವಾಗಿದೆ. ಹಣ ಪಡೆದ ಬಗ್ಗೆ ಚೀಟಿಯೂ ಐಟಿ ಅಧಿಕಾರಿಗಳಿಗೆ ದೊರೆತಿದೆ. ಪಂಚ ರಾಜ್ಯ ಚುನಾವಣೆಗೆ ಕಳಿಸಲು ಇಟ್ಟ ಹಣವಾಗಿದೆ ಎಂಬುದು ಸ್ಪಷ್ಟ. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್‍ಗೆ ಎಟಿಎಂ ಆಗಿದೆ.ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರಾಜೀನಾಮೆ ನೀಡಬೇಕು. ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಈ ಮೂಲಕ ತಮ್ಮ ಸಾಚಾತನ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಹಣ ನಿಗದಿ ಪಡಿಸಲಾಗಿದೆ. ವರ್ಗಾವಣೆ ದಂದೆಯಾಗಿ ಬೆಳೆದು ನಿಂತು ತಾಲೂಕು ಕಚೇರಿಯಿಂದ ಎಲ್ಲೆಡೆ ಲಂಚ ಕೇಳುವ ಪರಿಸ್ಥಿತಿ ಉಂಟಾಗಿದೆ.
ಮೈಸೂರು ದಸರದಲ್ಲಿ ಕಲಾವಿದನಿಂದ ಕಮಿಷನ್ ಪಡೆಯಲು ಮುಂದಾದ ಇಂತಹ ಕೆಟ್ಟ ಸರಕಾರ ಬೇರೆ ಇರಲಿಕ್ಕಿಲ್ಲ.ಇಂದು ಅಭಿವೃದ್ಧಿಗೆ ಹಣವೇ ಇಲ್ಲವಾಗಿದೆ. ಹದಿನೈದು ದಿನದಲ್ಲಿ ರಾಜ್ಯದಲ್ಲಿ ವಿದ್ಯುತ್ ಇಲ್ಲದೆ ಕತ್ತಲೆ ರಾಜ್ಯವಾಗುತ್ತಿದೆ. ಉಚಿತ ವಿದ್ಯುತ್ ಬಿಡಿ ಯಾರಿಗೂ ಇಲ್ಲವಾಗಿದೆ.32 ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಭಿವೃದ್ಧಿಗೆ ಹಣವಿಲ್ಲ. ಇದ್ದ ಖಜಾನೆಯೇ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಮನೆಯಲ್ಲಿ ಇರುವ ಹಾಗಿದೆ ಎಂದು ಹೇಳಿದರು.
ಬಿಜೆಪಿ ಕಾಂಗ್ರೆಸ್ ಸರಕಾರದ ಲಂಚಾವತಾರದ ವಿರುದ್ದ ರಾಜ್ಯ ವ್ಯಾಪಿ ಹೋರಾಟ ನಡೆಸಲು ನಿರಂತರವಾಗಿ ನಡೆಯಲಿದೆ ಎಂದರು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಮಾತನಾಡಿ,ನೂರು ಕೋಟಿ ಕಪ್ಪು ಹಣ ಕಾಂಗ್ರೆಸ್ ವ್ಯಕ್ತಿಗಳ ಮನೆಯಲ್ಲಿ ಪತ್ತೆಯಾಗಿದೆ.ಇದು ಚುನಾವಣೆಗೆ ಹಂಚಲು ತೆಗೆದಿಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಕನಿಷ್ಠ 25 ಲಕ್ಷ ಹಣ ನೀಡದೆ ದಾಖಲೆ ಸಿಗದ ಸ್ಥಿತಿಯಿದೆ.ಹೀಗಾಗಿ ಕಲೆಕ್ಷನ್ ಮಾಸ್ಟರ್ ಸಿದ್ದರಾಮಯ್ಯ ಎಂದೇ ಬಿಜೆಪಿ ಮುಖ್ಯಮಂತ್ರಿಯನ್ನು ಕರೆಯುತ್ತದೆ.ಯಾವುದೇ ಕೇಸು ದಾಖಲಿಸಿದರೂ ಕಾನೂನು ಹೋರಾಟ ಮಾಡಲೂ ಸಿದ್ದರಿದ್ದೇವೆ.ಮಂಗಳೂರಿಗೆ ಲಂಚ ಕೊಟ್ಟು ಸ್ಥಾನಕ್ಕೆ ಬಂದ ಅಧಿಕಾರಿಯೊಬ್ಬರು ಕೋಟಿ ಕೊಟ್ಟು ಬಂದು ಜನರಿಂದ ಸುಲಿಗೆ ಮಾಡುವ ಮಾಹಿತಿ ಬರುತ್ತಿದೆ. ಖಜಾನೆಯಲ್ಲಿ ಹಣವಿಲ್ಲದ ಕಾರಣ ನಮಗೆ ಅನುದಾನ ಸಿಗುತ್ತಿಲ್ಲ. ಈ ಸರಕಾರದ ಅಭಿವೃದ್ದಿಯಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಲಿದೆ ಎಂದರು.
ಆರು ತಿಂಗಳಲ್ಲಿ ಶಾಸಕರಿಗೆ ಹಣ ಬಿಡುಗಡೆ ಮಾಡುವ ಯೋಗ್ಯತೆ ಇಲ್ಲ. ಕನಿಷ್ಠ 50 ಸಾವಿರ ರೂ. ತೋಡು ಮಾಡಲು ಹಣ ವಿಲ್ಲ. ನಮ್ಮ ಸರಕಾರದಲ್ಲಿ ಈ ಕ್ಷೇತ್ರ ಒಂದಕ್ಕೇ 2ಸಾವಿರ ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ತಿಲಕ್ ರಾಜ್ ಕೃಷ್ಣಾಪುರ,ಕಸ್ತೂರಿ ಪಂಜ, ಪೂಜಾ ಪೈ,ರಣ್‍ದೀಪ್ ಕಾಂಚನ್,ಉಪಮೇಯರ್ ಸುನಿತಾ, ಬಿಜೆಪಿ ಮನಪಾ ಸದಸ್ಯರು, ಜಿಲ್ಲೆಯ ಪ್ರಮುಖರು,ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.