‘ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿ ಶಿಕ್ಷೆ ಆಗುತ್ತದೆ’ -ಮಧು ಬಂಗಾರಪ್ಪ
ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ರಾಗಿಗುಡ್ಡ ಶಾಂತಿ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಗರದಾದ್ಯಂತ 144 ಸೆಕ್ಷನ್ ಮುಂದುವರಿದಿದೆ. ಈ ನಡುವೆ ಶಿವಮೊಗ್ಗದ ಶಾಂತಿನಗರ ಸಮೀಪ ರಾಗಿಗುಡ್ಡಕ್ಕೆ ಇಂದು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದಾರೆ.
ಭೇಟಿ ಬಳಿಕ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ಸಂಬಂಧ ಪೊಲೀಸರು ಈವರೆಗೆ 24 ಎಫ್ಐಆರ್ ದಾಖಲಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗಲಾಟೆ ಸಂದರ್ಭದಲ್ಲಿ ಗಂಭೀರ ಆಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಗಲಾಟೆಯಲ್ಲಿ ಭಾಗಿಯಾದ ಯಾರನ್ನೂ ಬಿಡಲ್ಲ. ಕಾನೂನು ಎಲ್ಲರಿಗೂ ಒಂದೇ, ಎಲ್ಲರಿಗೂ ಒಂದೇ ರೀತಿ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ.