Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕಾವೇರಿಗಾಗಿ ಹೋರಾಟ ಮಾಡುತ್ತಿರುವವರು ಮೇಕೆದಾಟು ಯೋಜನೆ ಅನುಮತಿಗೆ ಯಾಕೆ ಒತ್ತಾಯಿಸುತ್ತಿಲ್ಲ’ – ಡಿಸಿಎಂ

ಬೆಂಗಳೂರು: “ಅನೇಕ ಸಂಘಟನೆಗಳು ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿರುವುದು ಒಳ್ಳೆಯ ಕೆಲಸ. ಅವರಿಗೆ ಅಭಿನಂದನೆಗಳು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದಾಗ ಈ ಸಂಘಟನೆಗಳು ಎಲ್ಲಿಗೆ ಹೋಗಿದ್ದವು? ಇವು ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರ ಸರಕಾರವನ್ನು ಯಾಕೆ ಆಗ್ರಹಿಸುತ್ತಿಲ್ಲ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ಕಾವೇರಿ ನೀರು ವಿಚಾರವಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಉತ್ತರಿಸಿದ ಶಿವಕುಮಾರ್ ಅವರು “ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆ ಒಂದೇ ಪರಿಹಾರ. ರಾಜಕಾರಣ ಮಾಡುವುದರಲ್ಲಿ ಪ್ರಯೋಜನ ಇಲ್ಲ. ಕಾವೇರಿ ನದಿ ನೀರಿನ ವಿಚಾರವಾಗಿ ಮಾತನಾಡುತ್ತಿರುವ ಈ ಸಂಘಟನೆಗಳಾಗಲಿ, ಬಿಜೆಪಿ, ಜನತಾ ದಳದ ನಾಯಕರುಗಳಾಗಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಏಕೆ ಆಗ್ರಹಿಸುತ್ತಿಲ್ಲ? ಪರಿಸರ ಇಲಾಖೆಯಿಂದ ಅನುಮತಿ ಯಾಕೆ ಕೊಡಿಸುತ್ತಿಲ್ಲ? ಈಗ ಹೋರಾಟ ಮಾಡುತ್ತಿರುವವರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಲ್ಲವೇ? ನಮ್ಮ ರೈತರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಅದೇ ಕಾರಣಕ್ಕೆ ತಮಿಳುನಾಡಿನವರು ನಿತ್ಯ 24 ಸಾವಿರ ಕ್ಯೂಸೆಕ್ ನೀರು ಕೇಳಿದ್ದರು. 3 ಸಾವಿರ ಕ್ಯೂಸೆಕ್ ಮಾತ್ರ ಬಿಡಲು ಸಾಧ್ಯ ಎಂದು ನಮ್ಮ ಅಧಿಕಾರಿಗಳು ಸಮರ್ಥವಾಗಿ ವಾದ ಮಾಡಿದರ ಪರಿಣಾಮ ಈಗ ಪ್ರಾಧಿಕಾರ 5 ಸಾವಿರ ಕ್ಯೂಸೆಕ್ ನೀರು ಬಿಡಲು ಅದೇಶಿಸಿದೆ.

ನ್ಯಾಯಾಲಯದಲ್ಲೂ ರಾಜ್ಯದ ಹಿತರಕ್ಷಣೆಗೆ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರವಾಗಿ ನಾನು ಕಾನೂನು ತಜ್ಞರ ತಂಡದ ಜತೆ ಚರ್ಚೆ ಮಾಡಿದ್ದೇನೆ. ನಮ್ಮ ಆಣೆಕಟ್ಟುಗಳ ವಾಸ್ತವ ಸ್ಥಿತಿ ಹೇಗಿದೆ ಎಂದು ಅವರಿಗೆ ಮನವರಿಕೆ ಮಾಡಲಿದ್ದೇವೆ.

ರಾಜ್ಯದಲ್ಲಿ ಬರದ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಈ ವಿಚಾರವಾಗಿ ಸಚಿವರು ಸಮೀಕ್ಷೆ ಮಾಡಿ, ವರದಿ ಚರ್ಚೆ ಮಂಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸಚಿವರು ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಬ್ಲಾಕ್ ಮೇಲ್ ಮಾಡಿ ಶಾಸಕರನ್ನು ಸೆಳೆಯುತ್ತಿದ್ದಾರೆ ಎಂಬ ಮಾಜಿ ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆ ಬಗ್ಗೆ ಕೇಳಿದಾಗ, “ಬ್ಲಾಕ್ ಮೇಲ್ ಸಂಸ್ಕೃತಿ ಬಗ್ಗೆ “ನವರಂಗಿ ನಾರಾಯಣ” ಮಾತನಾಡಿದ್ದಾರೆ. ಅದಕ್ಕೆ ನಮ್ಮ ಎಂ.ಬಿ. ಪಾಟೀಲರು ಸರಿಯಾಗಿ ಉತ್ತರ ನೀಡಿದ್ದಾರೆ” ಎಂದು ತಿಳಿಸಿದರು.