Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕಾವೇರಿ ನೆಪದಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದೆ’- ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ನನ್ನ ರಾಜೀನಾಮೆ ಕೇಳದ ಬಿಜೆಪಿ ಈಗ ಕೇಳುತ್ತಿರುವುದರ ಹಿಂದೆ ರಾಜಕೀಯವಿದೆ ಎಂದು ಆರೋಪಿಸಿದ್ದಾರೆ.

ಕಾವೇರಿ ನೀರು ಹರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದು, ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ನಮ್ಮ ಅರ್ಜಿ ವಜಾವಾಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ ಎರಡರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೆವು. ಸುಪ್ರೀಂಕೋರ್ಟ್ ನಮ್ಮ ಹಾಗೂ ತಮಿಳುನಾಡಿನ ಅರ್ಜಿಯನ್ನು ತಿರಸ್ಕಾರ ಮಾಡಿದೆ ಎಂದರು.

ಇನ್ನು ತಮಿಳುನಾಡು 24,000 ಕ್ಯೂಸೆಕ್ಸ್ ನೀರು ಕೇಳಿದ್ದರು. ನಂತರ 7200 ಕ್ಯೂಸೆಕ್ಸ್ ಕೇಳಿದ್ದು, ನಾವು 5000 ಕ್ಯೂಸೆಕ್ಸ್ ನೀರು ಕೂಡ ಕೊಡಲಾಗುವುದಿಲ್ಲ. ನಮ್ಮ ಬಳಿ ನೀರಿಲ್ಲ ಎಂದು ವಾದಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಲ್ಲ. ಪುನಃ ಸೆಪ್ಟೆಂಬರ್ 26 ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದ್ದು. ನಮ್ಮ ವಾದವನ್ನು ಇನ್ನಷ್ಟು ಬಲವಾಗಿ ಮಂಡಿಸಲಾಗುವುದು ಎಂದಿದ್ದಾರೆ