Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾವೇರಿ ವಿಚಾರದಲ್ಲಿ ಸರ್ಕಾರ ರಾಜ್ಯದ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಬೊಮ್ಮಾಯಿ

ಬೆಂಗಳೂರು: ತಮಿಳುನಾಡಿ ಕಾವೇರಿ ನೀರನ್ನು ಎಷ್ಟು ಬಳಸಿಕೊಂಡಿದೆ ಎಂದು ವಾದ ಮಾಡದೇ ರಾಜ್ಯ ಸರ್ಕಾರ ನಮ್ಮ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಅನಾರೋಗ್ಯದಿಂದ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮೊನ್ನೆಯೇ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿದ್ದೇನೆ. ಅವರು ಈಗ ಲವಲವಿಕೆಯಿಂದ ಇದ್ದಾರೆ. ಹಾಗಾಗಿ ಬೇಗ ಗುಣಮುಖ ಆಗಲಿ ಅಂತ ಆಶಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೆಪ್ಟಂಬರ್ 6 ರಂದು ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಕಾವೇರಿ ವಿಚಾರದಲ್ಲಿ ಸಿಡಬ್ಲೂಎಂಎ ಆದೇಶದಂತೆ ನೀರು ಬಿಡುತ್ತಿದ್ದಾರೆ. ನಮ್ಮವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿರುವ ಬಗ್ಗೆ ಸಮಗ್ರವಾಗಿ ಯಾಕೆ ವಾದ ಮಾಡುತ್ತಿಲ್ಲವೊ ಗೊತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಷ್ಟು ಮಳೆ ಬಿದ್ದಿದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು.

ಸೆಪ್ಟಂಬರ್ 6 ಕ್ಕೆ ವಿಚಾರಣೆ ಇದ್ದು, ಅಲ್ಲಿಯವರೆಗೂ ನೀರು ಹರಿಯುತ್ತದೆ. ಮೊದಲು ನೀರು ಹರಿಸುವುದನ್ನು ನಿಲ್ಲಿಸಿ ಆಮೇಲೆ ವಾದ ಮಾಡಬೇಕು. ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವುದು ಮುಖ್ಯ ಎಂದರು.

ರಾಜ್ಯ ಸರ್ಕಾರ ತಮಿಳುನಾಡು ಎಷ್ಟು ನೀರು ಬಳಕೆ ಮಾಡಿದೆ ಅಂತ ವಾದ ಮಾಡಲು ತಯಾರಿಲ್ಲಾ. ನಾವು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿಲ್ಲ, ಸರ್ಕಾರವೇ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕುಡಿಯೋ ನೀರಿನ ವಿಚಾರದಲ್ಲಿ ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಹೇಳಿದರು.

ಇನ್ನು ಪ್ರಜ್ವಲ್ ರೇವಣ್ಣ ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು.