Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕಾವೇರಿ ಹೋರಾಟ: ಇಂದು ಮಂಡ್ಯ, ಮದ್ದೂರ್ ಬಂದ್- ಪೊಲೀಸ್ ಬಿಗಿ ಭದ್ರತೆ

ಮಂಡ್ಯ: ದಿನದಿಂದ ದಿನ ಕಾವೇರಿ ಕಿಚ್ಚು ಹೆಚ್ಚಾಗುತ್ತಿದ್ದು, ಇಂದು ಮಂಡ್ಯ ಹಾಗೂ ಮದ್ದೂರ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ಇಂದು ರೈತ, ಕನ್ನಡ ಪರ, ಪ್ರಗತಿ ಪರ ಸಂಘಟನೆಗಳಿಂದ ಮಂಡ್ಯ ನಗರ ಹಾಗೂ ಮದ್ದೂರು ಪಟ್ಟಣ ಬಂದ್‍ಗೆ ಕರೆ ನೀಡಿವೆ.

ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎರಡೂ ನಗರಗಳು ಸಂಪೂರ್ಣ ಸ್ಥಬ್ದವಾಗಲಿದೆ. ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರು ಸಂಘಗಳು ಬೆಂಬಲ ಸೂಚಿಸಿದ್ದು. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದ್ದು, ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಬೆಂಬಲಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಲಿದ್ದಾರೆ.

10 ಗಂಟೆಗೆ ಸಂಜಯ ವೃತ್ತದಲ್ಲಿ ಪ್ರತಿಭಟನೆ, ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದು, ರೈತ ಸಂಘ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಮದ್ದೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ. ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿ, ಬಳಿಕ ಮದ್ದೂರಿನ ಕೊಲ್ಲಿ ಸರ್ಕಲ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಜೆ.ಸಿ. ವೃತ್ತದಲ್ಲಿ ರೈತ ಮುಖಂಡರು ರಸ್ತೆಯಲ್ಲೇ ಮಲಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತಮಿಳುನಾಡಿನ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.