Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕುಂದಾಪುರ: ಚೂರಿ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಕುಂದಾಪುರ: ಭಾನುವಾರ ರಾತ್ರಿ ಕುಂದಾಪುರದಲ್ಲಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್(42) ಸೋಮವಾರ ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸುಮಾರು 7 ಗಂಟೆಗೆ ರಾಘವೇಂದ್ರ ಅವರು ಕಾರಿನಲ್ಲಿ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿ ಬಳಿ ಹೋಗುತ್ತಿದ್ದರು. ಈ ವೇಳೆ ಕೆ.ಎ.51 ಎಂಜಿ 9665 ನಂಬರಿನ ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ತಗಾದೆ ತೆಗೆದು ಚೂರಿಯಿಂದ ರಾಘವೇಂದ್ರ ಅವರ ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರಗೊಂಡಿದ್ದ ರಾಘು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲದೆ ರಾಘವೇಂದ್ರ ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದ ವೇಳೆ ಪ್ರತ್ಯಕ್ಷದರ್ಶಿಯೊಬ್ಬ ಆರೋಪಿಯ ಕಾರು ಮತ್ತು ಕಾರಿನೊಳಗೆ ಕುಳಿತಿದ್ದ ಆರೋಪಿಯ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಇದರಿಂದ ಆರೋಪಿಯನ್ನು ತೀರ್ಥಹಳ್ಳಿ ಮೂಲದ ಶಾಫಿ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳಿಂದ ಕುಂದಾಪುರದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯಾದ ರಾಘವೇಂದ್ರ ಹಾಗೂ ಆರೋಪಿ ಶಾಫಿ ನಡುವಿನ ಹಣಕಾಸಿನ ತಕರಾರು ಕೊಲೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೃತ ರಾಘವೇಂದ್ರ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.