Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕುಮಾರಣ್ಣ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎನ್ನುತ್ತಿದ್ದಾರೆ’- ಡಿಕೆಶಿ ವ್ಯಂಗ್ಯ

ಬೆಂಗಳೂರು: “ಕುಮಾರಣ್ಣ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎನ್ನುತ್ತಿದ್ದಾರೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜೆಡಿಎಸ್ ಎನ್‌ಡಿಎಗೆ ಸೇರಿದ ಕಾರಣ, ಕೇರಳ ಸೇರಿದಂತೆ ಇತರೇ ರಾಜ್ಯಗಳ ಜೆಡಿಎಸ್ ಪಕ್ಷದ ನೂರಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ‘ಇಂಡಿಯಾ’ ಗೆ ಸೇರುತ್ತಿದ್ದಾರೆ.

ನಾನು ಕೇವಲ ಪಕ್ಷಕ್ಕೆ ಆಹ್ವಾನ ನೀಡಲು ಬಂದಿಲ್ಲ. ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ನೀಡಲು ಬಂದಿದ್ದೇನೆ. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ.

ಇತರರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸವನ್ನು ಬೆಂಗಳೂರಿಗೆ ಬಂದು ಮಾಡಬೇಕಾಗಿಲ್ಲ, ನೀವು ಇರುವ ಸ್ಥಳಗಳಲ್ಲೇ ಈ ಕೆಲಸ ಮಾಡಬೇಕು.

ಕಳೆದ ವರ್ಷ ಇದೇ ಹೊತ್ತಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೆವು‌. ಆದರೆ ಇಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅಂಬಾರಿ ಜೊತೆ ಹೆಜ್ಜೆ ಹಾಕುತ್ತಿದ್ದೇವೆ.

ಅಂಬಾರಿ ಮೆರವಣಿಗೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಟ್ಯಾಬ್ಲೋ ಮೆರವಣಿಗೆ ಮಾಡಲಾಯಿತು. ಇಡೀ ದೇಶವೇ ‘ಕರ್ನಾಟಕ ಮಾದರಿ’ ಅನುಕರಣೆ ಮಾಡಲು ಕಾಯುತ್ತಿದೆ. ಈ ದೇಶದ ಪ್ರಧಾನಿ ಮೋದಿಯವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು. ಆದರೆ ಈಗ ಐದು ಗ್ಯಾರಂಟಿಗಳ ಬಗ್ಗೆ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದಾರೆ.

ಯಡಿಯೂರಪ್ಪ ಅವರು ಒಂದು ಕಾಳು ಅಕ್ಕಿ ಕಡಿಮೆಯಾದರೂ ಹೋರಾಟ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಮಾಜಿ ಮಂತ್ರಿ ಹೇಳುತ್ತಿದ್ದರು, ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ- ಸೊಸೆಗೂ ಜಗಳ ತಂದು ಹಾಕುತ್ತಿದೆ ಸರ್ಕಾರ ಎಂದು. ಆದರೆ ಎಲ್ಲರ ಮಾತುಗಳು ಸುಳ್ಳಾಗಿವೆ, ಮೈಸೂರು ದಸರಾಗೆ ಲಕ್ಷಾಂತರ ತಾಯಂದಿರು, ಅಕ್ಕ- ತಂಗಿಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು, ಇಡೀ ಮೈಸೂರಿನ ತುಂಬಾ ಮಹಿಳೆಯರೇ ಇದ್ದರು. ನನ್ನ ಮನೆಯವರನ್ನು ದಸರಾ ನೋಡಲು ಕರೆದುಕೊಂಡು ಹೋಗಿದ್ದೆ, ಇಂತಹ ಬರಗಾಲದಲ್ಲೂ ಜನ ಸಂತೋಷದಿಂದ ಇರುವುದನ್ನು ನೋಡಿದೆ. ವಾಹನ ದಟ್ಟಣೆ ಹೆಚ್ಚಿದ್ದ ಕಾರಣ ಒಂದು ಗಂಟೆ ತಡವಾಯಿತು ಆದರೂ ಜನರನ್ನು ಕಂಡು ಸಂತೋಷವಾಯಿತು.

ನಾವು ಕೇವಲ ಬಸ್ ಪ್ರಯಾಣ ಮಾತ್ರ ಉಚಿತ ನೀಡಿದ್ದೇವೆ. ಹೋಟೆಲ್, ದೇವಸ್ಥಾನ, ಶಾಪಿಂಗ್ ಸೇರಿದಂತೆ ಅನೇಕ ಕಡೆಗಳಲ್ಲಿ ಖರ್ಚು ಮಾಡಿರುತ್ತಾರೆ. ಇದಕ್ಕೆ ನಾವು ಹಣ ಕೊಟ್ಟಿದ್ದೇವೆಯೇ? ಇಲ್ಲ ಆದರೆ ಗ್ಯಾರಂಟಿ ಯೋಜನೆಗಳಿಂದ ಹಣದ ವಹಿವಾಟು ಹೆಚ್ಚಾಗಿದೆ. ಹೋಟೆಲ್, ವಸತಿ ಸೇರಿದಂತೆ ಅನೇಕ ಕಡೆ ಬಿಲ್ ಕಟ್ಟುತ್ತಾರೆ. ಇದರಿಂದ ತೆರಿಗೆ ಸಂಗ್ರಹ ಪರೋಕ್ಷವಾಗಿ ಹೆಚ್ಚಳವಾಗುತ್ತಿದೆ. ಗೃಹಲಕ್ಷ್ಮೀಯರು ಶಕ್ತಿ ತುಂಬಿದರು, ಗೃಹಲಕ್ಷ್ಮೀಯರು ಮನೆ ಬೆಳಗುತ್ತಿದ್ದಾರೆ, ತಮ್ಮ ಪಾಲಿಗೆ ಬಂದ ಹಣವನ್ನು ಸಂಸಾರಕ್ಕೆ ವಿತರಣೆ ಮಾಡುತ್ತಿದ್ದಾರೆ. ಇದು ಜನರಿಗೆ ನಮ್ಮ ಪಕ್ಷ ನೀಡಿರುವ ಶಕ್ತಿ.

ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲು ಮೈಸೂರಿನಿಂದ ಓಡೋಡಿ ಬಂದೆ. ಮುಖ್ಯಮಂತ್ರಿಗಳು ಸಹ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ. ಎಂದು ಹೇಳಿದರು.