ಕೃಷಿಯಲ್ಲಿ ಉದ್ಯೋಗ ಮಾಡಿಕೊಳ್ಳಲು ಗರಿಷ್ಠ 20 ಲಕ್ಷ ಸಹಾಯಧನ ನೀಡಲು ಅರ್ಜಿ ಆಹ್ವಾನ..!
ಕರ್ನಾಟಕ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ‘ ಕೃಷಿ ನವೋದ್ಯಮ ‘ ಎಂಬ ಹೊಸ ಯೋಜನೆ ಜಾರಿಗೊಳಿಸುತ್ತಿದೆ . ಕೃಷಿ ವಲಯಲ್ಲಿನ ನೂತನ ತಾಂತ್ರಿಕತೆಗಳು , ಆವಿಷ್ಕಾರ ಹಾಗೂ ನವೀನ ಪರಿಕಲ್ಪನೆಗಳ ಸೇವೆಗಳನ್ನು ಒಳಗೊಂಡ ವಾಣಿಜೀಕರಣವನ್ನು ಉತ್ತೇಜಿಸುವ ಗುರಿಯೊಂದಿಗೆ ನೂತನ ಯೋಜನೆ ಅನುಷ್ಠಾನಗೊಳ್ಳುತ್ತಿದೆ . ಈ ಯೋಜನೆಯಡಿ ಗರಿಷ್ಠ 20 ಲಕ್ಷ ರೂ . ವರೆಗೆ ಸಹಾಯಧನ ನೀಡಲಾಗುತ್ತದೆ . ಕೃಷಿ ಪದವೀಧರರು , ವಿದ್ಯಾವಂತ ಯುವಕರು , ಆಸಕ್ತ ಪ್ರಗತಿ ಪರ ರೈತರು ಹೊಸದಾಗಿ ಕೃಷಿಯಲ್ಲಿ ನವೋದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಸ್ಟಾರ್ಟಪ್ ಯೋಜನೆಯ ವರದಿಯ ಶೇ 50 ರಷ್ಟು ಅಂದರೆ 5 ರಿಂದ 20 ಲಕ್ಷ ರೂ . ವರೆಗೆ ಸಬ್ಸಿಡಿ ಸಿಗಲಿದೆ.
ಯೋಜನೆಯ ವಿವರ: ಕೋವಿಡ್ ಪರಿಸ್ಥಿತಿಯ ಬಳಿಕ ನಗರಗಳಿಂದ ಯುವಕರು ಗ್ರಾಮಗಳಿಗೆ ಆಗಮಿಸುವುದು ಕೃಷಿ , ಕೃಷಿಯ ಇತರ ಉದ್ಯಮದಲ್ಲಿ ತೊಡಗುವುದು ಹೆಚ್ಚಾಗಿದೆ . ಆದ್ದರಿಂದ ರಾಜ್ಯ ಸರ್ಕಾರ ಕೃಷಿ ಉತ್ಪನ್ನಗಳ ಮಾರುಕಟ್ಟೆ , ಮೌಲ್ಯ ವರ್ಧನೆ ಪ್ರೋತ್ಸಾಹಿಸಲು ‘ ಕೃಷಿ ನವೋದ್ಯಮ ‘ ಎಂಬ ಯೋಜನೆ ಜಾರಿಗೊಳಿಸುತ್ತಿದೆ . ಈ ಬಾರಿಯ ಬಜೆಟ್ ಮಂಡನೆ ಮಾಡಿದ ಹಣಕಾಸು ಖಾತೆ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ‘ ಕೃಷಿ ನವೋದ್ಯಮ ‘ ಎಂಬ ಯೋಜನೆ ಘೋಷಣೆ ಮಾಡಿದ್ದರು . ಅಲ್ಲದೇ 10 ಕೋಟಿ ರೂ . ಅನುದಾನವನ್ನು ಮೀಸಲಿಟ್ಟರು.
‘ ಕೃಷಿ ನವೋದ್ಯಮ ‘ ಯೋಜನೆಯಡಿ ಹೊಸ ಯೋಜನೆ ಅಲ್ಲದೇ ಈಗಾಗಾಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೇರಿಸಲು ( Scale up ) ಗೂ ಶೇ .50 ರಷ್ಟು ಸಹಾಯಧನ ( 20 ರಿಂದ ಗರಿಷ್ಠ 50 ಲಕ್ಷ ರೂ . ) ವರೆಗೆ ಬ್ಯಾಂಕ್ನಿಂದ ಸಾಲದ ಮೂಲಕ ( Backended Subsidy ) ನೀಡಲಾಗುತ್ತದೆ .< ಯೋಜನೆಯ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿ , ಅನುಷ್ಠಾನ ಸಮಿತಿ ಒಪ್ಪಿಗೆಯ ನಂತರ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದ ಬಳಿಕ ಆಯ್ಕೆ ಮಾಡಿ ಸಹಾಯಧನವನ್ನು ನೀಡಲಾಗುತ್ತದೆ.
ಆಸಕ್ತರು ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು . ರೈತರನ್ನು ಉದ್ಯಮಿಗಳಾಗಿ ಮಾಡಿದರೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಆಗುತ್ತದೆ . ಇದರಿಂದಾಗಿ ರೈತರ ಆದಾಯ ದ್ವಿಗುಣವಾಗುತ್ತದೆ . ಈಗಾಗಲೇ ಹಲವು ರೈತರು ಇಂತಹ ಉದ್ಯಮ ಸ್ಥಾಪನೆ ಮಾಡಿ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಪಡೆದಿದ್ದಾರೆ . ಕೃಷಿ ವಿವಿಗಳ ಸಂಶೋಧನೆಗಳನ್ನು ಜಮೀನಿಗೆ ತೆಗೆದುಕೊಂಡು ಹೋಗುವುದು , ನವೋದ್ಯಮ ಸ್ಥಾಪನೆಗೆ ಸರ್ಕಾರ ಈ ಯೋಜನೆಯಡಿ ಸಬ್ಸಿಡಿ ನೀಡಲಿದೆ.
ನವೋದ್ಯಮಗಳನ್ನು ಗುರುತಿಸಲು ಜಿಲ್ಲಾ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗುತ್ತದೆ.ಸರ್ಕಾರ ಮೊದಲ ಹಂತದಲ್ಲಿ ಮೈಸೂರು , ಹುಬ್ಬಳ್ಳಿ , ಕಲಬುರಗಿ , ಮಂಗಳೂರು , ಬೆಳಗಾವಿ , ವಿಜಯಪುರ , ದಾವಣಗೆರೆ , ಶಿವಮೊಗ್ಗ ಮತ್ತು ಬಳ್ಳಾರಿ ಹೀಗೆ ಎರಡನೇ ದರ್ಜೆಯ ನಗರಗಳಲ್ಲಿ ಇಂತಹ ನವೋದ್ಯಮ ಸ್ಥಾಪನೆ ಮಾಡಲು ಒತ್ತು ನೀಡಲಿದೆ . ಆ ಪ್ರಾದೇಶಿಕ ಭಾಗದ ಕೃಷಿ ಉತ್ಪನ್ನಗಳನ್ನು ಆಧರಿಸಿ ಉದ್ಯಮ ಸ್ಥಾಪನೆ ಮಾಡುವುದು ಸರ್ಕಾರದ ಆಶಯ . ಕೇಂದ್ರ ಸರ್ಕಾರ 2014 ರಿಂದಲೇ ನವೋದ್ಯಮ ಸ್ಥಾಪನೆಗೆ ಒತ್ತನ್ನು ನೀಡುತ್ತಿದೆ.
ದೇಶದಲ್ಲಿ 70 ಸಾವಿರಕ್ಕೂ ಅಧಿಕ ಸ್ಟಾರ್ಟ್ ಅಪ್ಗಳಿವೆ . ಆದರೆ ಕೃಷಿಗೆ ಸಂಬಂಧಿಸಿದ ನವೋದ್ಯಮಗಳು ಕಡಿಮೆ . ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ , ಕೃಷಿ ಸಂಬಂಧಿತ ನವೋದ್ಯಮಗಳು ಹೆಚ್ಚಾಗಬೇಕು ಎಂದು ಪ್ರೋತ್ಸಾಹವನ್ನು ನೀಡುತ್ತಿವೆ . ನವೋದ್ಯಮಗಳ ಸ್ಥಾಪನೆಯಿಂದ ರೈತರಿಗೆ ನೆರವಾಗುವುದಲ್ಲದೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ . ಇದರಿಂದ ಪ್ರಾದೇಶಿಕ ಮಟ್ಟದಲ್ಲಿಯೇ ರೈತರ ಬೆಳೆಗಳಿಗೆ ಬೇಡಿಕೆ ಬರಲಿದೆ.