Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೆಂಪೇಗೌಡ ಏರ್‌ಪೋರ್ಟ್‌: ಟರ್ಮಿನಲ್-2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭ

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ನಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಸಜ್ಜಾಗಿದೆ. ಕೆಂಪೇಗೌಡ ಏರ್ಪೋಟ್ ಎಂಡಿ ಹರಿಮಾರನ್ ಅವರು ಇಂದು ಟರ್ಮಿನಲ್-2ನಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10.45ಕ್ಕೆ ಟರ್ಮಿನಲ್-2ಗೆ ಮೊದಲ ವಿದೇಶಿ ವಿಮಾನ ಬಂದಿಳಿಯಲಿದೆ. ಇನ್ನು ಹಳೆಯ ಟರ್ಮಿನಲ್-1 ದೇಶಿಯ ವಿಮಾನಗಳ‌ ಹಾರಾಟಕ್ಕೆ ಮೀಸಲಿಡಲಾಗಿದೆ.

ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳಿಂದ ಸುತ್ತುವರಿದಿರುವ ಈ ಟರ್ಮಿನಲ್ ಅನ್ನು ಟರ್ಮಿನಲ್ ಇನ್​ ದಿ ಗಾರ್ಡನ್ ಎಂದು ಕರೆಯಲಾಗುತ್ತಿದೆ. ಈ ಟರ್ಮಿನಲ್​​​ನಲ್ಲಿ 180 ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಸಸ್ಯಗಳಿವೆ. 3,600 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳು, ಬಿದಿರು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು, 96 ಕಮಲ ಮತ್ತು ಇನ್ನೂ ಹೆಚ್ಚಿನ ಸಸ್ಯಗಳಿವೆ.

10 ಸಾವಿರ ಚದರ‌ ಮೀಟರ್ ಹಸಿರು ಗೋಡೆ, ಕೃತಕ ವಾಟರ್ ಫಾಲ್ಸ್​ ಜೊತೆ ನೂರಾರು ವರ್ಷಗಳ ಹಳೆಯ ಮರವನ್ನು ಟರ್ಮಿನಲ್-2 ಹೊಂದಿದೆ. ಇನ್ನು 2 ಲಕ್ಷ 55 ಸಾವಿರದ 661 ಚದರ್ ಮೀಟರ್​ನ ನೂತನ ಟರ್ಮಿನಲ್-2ನಲ್ಲಿ ಪ್ರತ್ಯೇಕ ವಿಮಾನ ಆಗಮ‌ನ ಹಾಗೂ ನಿರ್ಗಮನದ 2 ಹಂತಗಳನ್ನು ಹೊಂದಿದ್ದು, 5 ಜಿ ನೆಟ್ವರ್ಕ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಚೆಕ್ ಇನ್, ಬ್ಯಾಗೇಜ್ ಡ್ರಾಪ್ ಕೌಂಟರ್ ವ್ಯವಸ್ಥೆ ಇದೆ.

ಕಳೆದ ವರ್ಷ ನವೆಂಬರ್​​ನಲ್ಲಿ ಪ್ರಧಾನಿ ಮೋದಿ 5 ಸಾವಿರ ಕೋಟಿ ‌ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಗಾರ್ಡನ್ ಟರ್ಮಿನಲ್ 2 ಉದ್ಘಾಟಿಸಿದ್ದರು. ಆಗಸ್ಟ್‌ 31 ರಿಂದಲೇ ಟರ್ಮಿನಲ್‌-2ರಿಂದ ಅಂತರರಾಷ್ಟ್ರೀಯ ವಿಮಾನಯಾನ ಅಧಿಕೃತವಾಗಿ ಪ್ರಾರಂಭವಾಗಬೇಕಿತ್ತು. ಆದರೆ, ತಾಂತ್ರಿಕ ಅಡೆತಡೆ ಹಾಗೂ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಮುಂದೂಡಿತ್ತು.