ಕೆಎಸ್ಆರ್ಟಿಸಿ ಅಪಘಾತ ಪರಿಹಾರ ಮೊತ್ತ 3ರಿಂದ 10 ಲಕ್ಷ ರೂ.ಗೆ ಹೆಚ್ಚಳ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ, ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ ನೀಡುತ್ತಿದ್ದ ಪರಿಹಾರಧನವನ್ನು ಕೆಎಸ್ಆರ್ಟಿಸಿ ಹೆಚ್ಚಿಸಿದೆ. ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು ರೂ.3,00,000 ದಿಂದ ಹತ್ತು ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಆದೇಶ 2024ರಿಂದ ಜಾರಿಗೆ ಬರಲಿದೆ.
ಈ ಬಗ್ಗೆ ಕ.ರಾ.ರ.ಸಾ ನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ಸುತ್ತೋಲೆ ಹೊರಡಿಸಿದ್ದು, ಅಪಘಾತಕ್ಕೀಡಾದವರ ಕುಟುಂಬಸ್ಥರಿಗೆ ಹೆಚ್ಚುವರಿ ಪರಿಹಾರ ನೀಡಲು, ಕೆಎಸ್ಆರ್ಟಿಸಿ ಬಸ್ಗಳಲ್ಲಿ 50 ರಿಂದ 99 ರೂಪಾಯಿಗಳ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ 1 ರೂ. ಸಂಗ್ರಹಿಸಲಾಗುತ್ತದೆ. ಇದರ ಜೊತೆಗೆ 100 ಮತ್ತು ಅದಕ್ಕಿಂತ ಹೆಚ್ಚಿನ ಟಿಕೆಟ್ ಮೌಲ್ಯದ ಪ್ರಯಾಣಿಕರಿಂದ 2 ರೂ.ಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.
ಆದರೆ ಈ ಹಿಂದೆ, 100 ರೂ. ಮತ್ತು ಅದಕ್ಕಿಂತ ಹೆಚ್ಚಿನ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಕೇವಲ 1 ರೂ ಮೊತ್ತವನ್ನು ಪರಿಹಾರ ನಿಧಿಗೆ ಸಂಗ್ರಹಿಸಲಾಗುತ್ತಿತ್ತು. ಇನ್ನು ರೂ. 1 ರಿಂದ ರೂ 49 ರ ಟಿಕೆಟ್ ಮೌಲ್ಯದೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಯಾವುದೇ ಅಪಘಾತ ಪರಿಹಾರ ನಿಧಿಯ ಕೊಡುಗೆಯನ್ನು ಸಂಗ್ರಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.