Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೇಂದ್ರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆ ಜಾರಿಗೊಳಿಸಲಿ; ಬಿಜೆಪಿಗರಿಗೆ ಡಿಸಿಎಂ ಸವಾಲು

“ಬಿಜೆಪಿ ಸ್ನೇಹಿತರು ಕೆಆರ್ ಎಸ್ ಆಣೆಕಟ್ಟಿಗೆ ಭೇಟಿ ನೀಡುವ ಮೊದಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮೇಕೆದಾಟು ಯೋಜನೆ ಜಾರಿಗೊಳ್ಳುವಂತೆ ನೋಡಿಕೊಳ್ಳಲಿ. ಆಗ ಬಿಜೆಪಿಯವರ ನಿಜವಾದ ಬಣ್ಣ ಬಯಲಿಗೆ ಬರುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, “ನಾವು ಮೇಕೆದಾಟು ಪಾದಯಾತ್ರೆ ಮಾಡಿದ ನಂತರ ಬೊಮ್ಮಾಯಿ ಅವರು ಬಜೆಟ್ ನಲ್ಲಿ 1 ಸಾವಿರ ಕೋಟಿ ಹಣ ಇಟ್ಟಿದ್ದು ಏಕೆ? ಕೇಂದ್ರ ಸರ್ಕಾರದಿಂದ ನಿರಪೇಕ್ಷಣಾ ಪತ್ರ ಏಕೆ ತರಲಿಲ್ಲ? ಮೊದಲು ಈ ಕೆಲಸ ಮಾಡಲಿ, ಆಗ ಬಿಜೆಪಿಯವರ ಹೋರಾಟಕ್ಕೆ ಬೆಲೆ ಬರುತ್ತದೆ” ಎಂದರು.

ಕಾವೇರಿ ನೀರಿನ ವಿಚಾರವಾಗಿ ಸರ್ವಪಕ್ಷ ನಿಯೋಗ ಯಾವಾಗ ಕರೆದುಕೊಂಡು ಹೋಗುತ್ತೀರ ಎನ್ನುವ ಪ್ರಶ್ನೆಗೆ “ನಾವು ಪ್ರಧಾನಿಯವರ ಭೇಟಿಗೆ ಪತ್ರ ಬರೆದಿದ್ದೇವೆ. ಅವರು ದಿನಾಂಕ ನಿಗಧಿ ಮಾಡಿದ ತಕ್ಷಣ ಹೋಗುತ್ತೇವೆ. ಬಿಜೆಪಿಯವರಿಗೆ ಸುದ್ದಿಯಲ್ಲಿ ಇರಬೇಕು ಎನ್ನುವ ಹಂಬಲ ಅದಕ್ಕೆ ಅನವಶ್ಯಕ ಹೋರಾಟಗಳನ್ನು ಮಾಡುತ್ತಿದ್ದಾರೆ. ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಮಾಡಲಿ. ಕುಡಿಯುವ ನೀರು ನಮ್ಮ ಮೊದಲ ಆದ್ಯತೆ” ಎಂದು ಹೇಳಿದರು.

ಭಾರತ ಜೋಡೋ ವಿಚಾರವಾಗಿ ಮಾತನಾಡಿ, “ಭಾರತ್ ಜೋಡೋ ಯಾತ್ರೆಗೆ ಇಂದಿಗೆ 1 ವರ್ಷವಾಗುತ್ತಿದೆ. ಇದರ ಸಂಭ್ರಮಾಚರಣೆಯನ್ನು ರಾಮನಗರದಲ್ಲಿ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಸಚಿವ ಸಂಪುಟ ಸಭೆ ಇರುವ ಕಾರಣ ಜಿಲ್ಲಾ ಮಂತ್ರಿಗಳಿಗೆ ಎರಡು ದಿನ ಕಾಲಾವಕಾಶ ನೀಡಿದ್ದೇವೆ” ಎಂದು ತಿಳಿಸಿದರು..