Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಖಾಸಗಿ ಸಾರಿಗೆಯ ವಾಸ್ತವಕ್ಕೆ ದೂರವಾದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ’ – ಸಿಎಂ

ಮೈಸೂರು: ಖಾಸಗಿ ಸಾರಿಗೆಯವರು ನಷ್ಟ ತುಂಬಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಸಾರಿಗೆಯವರ ಈ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರ, ಬಂದ್​ ಮಾಡಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು. ನಾವು ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿ ತಂದಿದ್ದೇವೆ. ಅದರಿಂದ ಖಾಸಗಿ ಬಸ್​ನವರಿಗೆ ನಷ್ಟ ಆಗಿದೆ ಎನ್ನುತ್ತಿದ್ದಾರೆ.

ಖಾಸಗಿ ಸಾರಿಗೆಯವರು ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಖಾಸಗಿ ಬಸ್‌ನವರು ಶಕ್ತಿ ಯೋಜನೆಯಿಂದ ನಮಗೆ ನಷ್ಟ ಆಗುತ್ತಿದೆ, ಹಣ ಕೊಡಿ ಅಂತ ಕೇಳುತ್ತಿದ್ದಾರೆ, ಅದೆಲ್ಲ ಸಾಧ್ಯವೇ? ಬಂದ್ ಹತ್ತಿಕ್ಕಲು ಅವಕಾಶ ಇಲ್ಲ. ಕಾನೂನಿಗೆ ತೊಂದರೆ ಆಗದ ರೀತಿಯಲ್ಲಿ ಬಂದ್ ಮಾಡಲಿ. ಬೇಡಿಕೆಗಳ ಬಗ್ಗೆ ಸಚಿವ ರಾಮಲಿಂಗರೆಡ್ಡಿ ಗಮನ ಹರಿಸುತ್ತಾರೆ ಎಂದರು.

ಇನ್ನು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ಮಾತನಾಡಿದ ಅವರು ನಾವೇನು ಖುಷಿಯಿಂದ ನೀರು ಬಿಡುತ್ತಿಲ್ಲ. ಕಾವೇರಿ ನದಿ ನಿರ್ವಹಣ ಪ್ರಾಧಿಕಾರದ ಆದೇಶದಂತೆ ನೀರು ಬಿಡುತ್ತಿದ್ದೇವೆ. ಸೆ.21ರಂದು ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನದಿ ನೀರಿನ ವಿಚಾರಣೆ ಇದೆ. ನಮ್ಮ ವಕೀಲರು ರಾಜ್ಯದ ವಸ್ತುಸ್ಥಿತಿ ಬಗ್ಗೆ ಮನವರಿಕೆ ಮಾಡುತ್ತಾರೆ. ರಾಜ್ಯದ ರೈತರ ಹಿತದೃಷ್ಟಿ ಕಾಪಾಡುವುದು ನಮಗೆ ಮುಖ್ಯ ಎಂದು ಹೇಳಿದರು.