ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಬೆಳ್ಳಿ ತೆರೆಗೆ ಎಂಟ್ರಿ
ಬೆಂಗಳೂರು: ಬಿಗ್ ಬಾಸ್ ವಿನ್ನರ್ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ಹೆಸರಿಡದ ಸಿನಿಮಾವೊಂದರಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರು ರಿಯಲ್ ಲೈಫ್ ನಲ್ಲಿ ಅಷ್ಟೇ ಅಲ್ಲದೆ ರೀಲ್ ಲೈಫ್ ನಲ್ಲೂ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪುನೀತ್ ಶ್ರೀನಿವಾಸ್ ಅವರು ಕಥೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಸೈಕೋಥ್ರಿಲ್ಲರ್ ಸಿನಿಮಾದಲ್ಲಿ ಇವರಿಬ್ಬರು ನಟಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ನಿವೇದಿತಾ ಗೌಡ ದಂಪತಿ ಬೆಳ್ಳಿತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಪುನೀತ್ ಶ್ರೀನಿವಾಸ್ ಅವರು ನಿರ್ದೇಶಕ ನಂದಕಿಶೋರ್ ಅವರ ಬಳಿ ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿ ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಈ ಸಿನಿಮಾಗೆ ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಅವರು ಬಂಡವಾಳ ಹೂಡುತ್ತಿದ್ದು, ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಸಂಯೋಜನೆ, ಕರುಣಾಕರ್ ಅವರು ಛಾಯಾಗ್ರಹಣ ಮಾಡಲಿದ್ದಾರೆ. ಇನ್ನು ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ಸದ್ಯದಲ್ಲೇ ಸಿನಿಮಾ ಶೀರ್ಷಿಕೆ ಹಾಗೂ ಮುಹೂರ್ತದ ದಿನಾಂಕವನ್ನು ಪ್ರಕಟಿಸುತ್ತೇವೆ ಎಂದು ನಿರ್ದೇಶಕ ಪುನೀತ್ ಹೇಳಿದ್ದಾರೆ.