ಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯ
ಚೆನ್ನೈ: ನಿಯಂತ್ರಣ ತಪ್ಪಿ ಟ್ರಕ್ ವೊಂದು ಚಹಾದಂಗಡಿ ಹಾಗೂ ಇತರೆ ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ 5 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಮಧುರವಾಯಲ್ನ ಸುರೇಶ್ (39), ಗೋಕುಲಕೃಷ್ಣನ್ (25) ತಿರುವಳ್ಳೂರಿನ ಸತೀಶ್(25), ಅಮಿಂಜಿಕರೈ, ಜೆಗನಾಥನ್ (60) ಶಾಂತಿ(55) ಎಂದು ಗುರುತಿಸಲಾಗಿದೆ.
ಟ್ರಕ್ ಅರಿಯಲೂರಿನಿಂದ ಶಿವಗಂಗೈಗೆ ಸಿಮೆಂಟ್ ಚೀಲಗಳನ್ನು ಹೊತ್ತುಕೊಂಡು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಅಪಘಾತ ವೇಳೆ ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಟ್ರಕ್ ನಿಯಂತ್ರಣ ತಪ್ಪಿ ಚಹಾದಂಗಡಿ ಹಾಗೂ ಪಕ್ಕದಲ್ಲಿದ್ದ ವಾಹನಗಳಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇನ್ನು ಅಪಘಾತದ ಸಂದರ್ಭದಲ್ಲಿ ಅಂಗಡಿಯಲ್ಲಿ ಹಲವಾರು ಶಬರಿಮಲೆ ಯಾತ್ರಾರ್ಥಿಗಳು ಟೀ ಸೇವಿಸುತ್ತಿದ್ದರು. ಅಂಗಡಿ ಬಳಿ ನಿಲ್ಲಿಸಿದ್ದ ಕಾರು ಹಾಗೂ ಇತರೆ ದ್ವಿಚಕ್ರ ವಾಹನಗಳಿಗೂ ಅಪಘಾತದಿಂದ ಹಾನಿ ಉಂಟಾಗಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ.