ಚಾರಣಕ್ಕೆ ತೆರಳಿದ್ದ ಯುವಕನಿಗೆ ಹೃದಯಾಘಾತ: ಸ್ಥಳದಲ್ಲೇ ಸಾವು
ಕೊಡಗು: ಚಾರಣಕ್ಕೆ ತೆರಳಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಕಕ್ಕಬ್ಬೆ ತಡಿಯಂಡಮೋಳು ಬೆಟ್ಟದಲ್ಲಿ ನಡೆದಿದೆ. ಹರಿಯಾಣ ಮೂಲದ ಜತಿನ್ ಕುಮಾರ್ (25) ಮೃತ ದುರ್ದೈವಿ.
ಬೆಂಗಳೂರಿನ ಜೆಪಿ ನಗರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜತಿನ್ ಕುಮಾರ್ ಚಾರಣ ಪ್ರಿಯರಾಗಿದ್ದು, ಅತಿ ಎತ್ತರದ ಬೆಟ್ಟವಾದ ತಡಿಯಂಡಮೋಳ್ ನೋಡಲು ತನ್ನ ಸ್ನೇಹಿತರ ಜೊತೆ ಆಗಮಿಸಿದ್ದರು.
ಬೆಟ್ಟದ ಮೇಲೆ ತಲುಪಿದಾಗ ತೀವ್ರ ಎದೆನೋವಿಗೆ ಒಳಗಾದ ಜತಿನ್ ಹೃದಯಾಘಾತದಿಂದ ಬೆಟ್ಟದ ಮೇಲೆಯೆ ಕೊನೆಯುಸಿರೆಳೆದರು. ಅವರನ್ನು ಕಾಪಾಡಿಕೊಳ್ಳಲು ಸಹಚಾರಣಿಗರು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಜತಿನ್ ಅವರ ಮೃತದೇಹವನ್ನು ಸಿಬ್ಬಂದಿಗಳು ಹೊತ್ತು ತಂದಿದ್ದಾರೆ. ಘಟನೆ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.