Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚುನಾವಣಾ ಅಕ್ರಮ ಆರೋಪ- ಪ್ರಜ್ವಲ್ ನಂತರ ರೇವಣ್ಣಗೆ ಅನರ್ಹತೆ ಭೀತಿ

ಬೆಂಗಳೂರು: ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್.ಡಿ ರೇವಣ್ಣ ಮೇಲೆ ಚುನಾವಣೆ ವೇಳೆ ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಕೋರಲಾಗಿರುವ ಅರ್ಜಿ ಸಂಬಂಧ ವಿಧಾನಸಭೆ ಕಾರ್ಯದರ್ಶಿ ಮೂಲಕ ರೇವಣ್ಣಗೆ ಸಮನ್ಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಈ ಮೂಲಕ ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಬಳಿಕ, ಈಗ ಹೆಚ್ ಡಿ ರೇವಣ್ಣ ಮೇಲೂ ಅನರ್ಹತೆ ತೂಗುಗತ್ತಿ ನೇತಾಡುವಂತೆ ಆಗಿದೆ. ಹೆಚ್.ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದ ದೇವರಾಜೇಗೌಡ ಅವರು ಸಲ್ಲಿಸಿದ್ದಂತ ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠವು ನಡೆಸಿತು. ಈ ಪ್ರಕರಣದಲ್ಲಿ ಹೆಚ್ ಡಿ ರೇವಣ್ಣ ಅವರಿಗೆ ಸಮನ್ಸ್ ಮರು ಜಾರಿಗೆ ಆದೇಶಿಸಲಾಗಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿ ಸಂಬಂಧ ಈ ಹಿಂದೆ ಹೈಕೋರ್ಟ್ ಜಾರಿಗೊಳಿಸಿರುವ ಸಮನ್ಸ್ ಅನ್ನು ಹೆಚ್ ಡಿ ರೇವಣ್ಣ ಸ್ವೀಕರಿಸಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠವು, ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿಗೊಳಿಸಲು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ.