Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚುನಾವಣೆ ಕರ್ತವ್ಯ ನಿರ್ಲಕ್ಷ್ಯ : 3 ಬಿ.ಎಲ್.ಓಗಳ ಅಮಾನತು

 

ಚಿತ್ರದುರ್ಗ :  ಚುನಾವಣೆ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ ಚಿಕ್ಕಪುರ ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಹ ಶಿಕ್ಷಕಿ ಜಯಮ್ಮ ಕೆ.ಬಿ., ತೋಪುರ ಮಾಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸಹ ಶಿಕ್ಷಕಿ ರೂಪ ಎಸ್, ಮಠದ ಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ದೈಹಿಕ ಶಿಕ್ಷಕ ಕೆ.ಗಿರಿಜಮ್ಮ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಮೂನೆ-6 ಮತ್ತು 7 ರ ಪರಿಶೀಲನೆ, 85 ವರ್ಷ ಮೇಲ್ಪಟ  ವಯಸ್ಸಿನ ಹಿರಿಯ ನಾಗರೀಕರಿಗೆ ಮತ್ತು ವಿಕಲಚೇತನ ಮತದಾರರಿಗೆ ಅಂಚೆ ಮತ ಪತ್ರದ ಮೂಲಕ ಮತದಾನ ಕಾರ್ಯ ಹಾಗೂ ಎಪಿಕ್ ಕಾರ್ಡ್‍ಗಳ ವಿತರಣೆ ಕೆಲಸಗಳು ಅತ್ಯಂತ ತುರ್ತಾಗಿ ನಿರ್ವಹಿಸಬೇಕಾಗಿರುತ್ತದೆ.  ಈ ಹಿನ್ನಲೆಯಲ್ಲಿ ಅಮಾನತುಗೊಂಡ ಮೂವರು ಶಿಕ್ಷಕಿಯರನ್ನು ಮತಗಟ್ಟೆ ಅಧಿಕಾರಿಗಳಾಗಿ (ಬಿ.ಎಲ್.ಓ) ಕರ್ತವ್ಯಕ್ಕೆ ನೇಮಿಸಿ ಆದೇಶಿಸಲಾಗಿತ್ತು. ಕರ್ತವ್ಯಕ್ಕೆ ಹಾಜರಾಗದೆ, ಇಲ್ಲ ಸಲ್ಲದ ಸಬೂಬು ಹೇಳಿ 3 ಶಿಕ್ಷಕಿಯರು ಲೋಪ ಎಸಗಿದ್ದಾರೆ ಎಂದು ಉಪವಿಭಾಗಾಧಿಕಾರಿ ವರದಿ ಸಲ್ಲಿಸಿದ್ದರು.

ಇದನ್ನು ಆಧರಿಸಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರ ಸೆಕ್ಷನ್ 134 ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(2)(8) ರಡಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದಲೇ ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಚುನಾವಣೆ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜು ಇಲ್ಲದೆ ಕಠಿಣಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.