Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಚೈತ್ರಾ ಕುಂದಾಪುರ ಪ್ರಕರಣದ ಸುದ್ದಿ ಪ್ರಕಟಿಸುವಾಗ ಕುಂದಾಪುರ ಹೆಸರು ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ

ಬೆಂಗಳೂರು : ಎಂಎಲ್ಎ ಟಿಕೆಟ್ ಪ್ರಕರಣದಲ್ಲಿ ಕೋಟಿ ಕೋಟಿ ಹಣ ವಂಚನೆ ಮಾಡಿ ಸಿಕ್ಕಿಬಿದ್ದಿರುವ ಚೈತ್ರಾ ಕುಂದಾಪುರ ಪ್ರಕರಣದ ವರದಿ ವೇಳೆ ಕುಂದಾಪುರ ಹೆಸರು ಬಳಕೆ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ವ್ಯಕ್ತಿಯೊಬ್ಬರು ದಾವೆ ಹೂಡಿದ್ದಾರೆ.

ಈ ಕುರಿತಂತೆ ಬಾರ್ ಅಂಡ್ ಬೆಂಚ್ ವೆಬ್ ಸೈಟ್ ವರದಿ ಮಾಡಿದ್ದು, ವರದಿ ಪ್ರಕಾರ ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್‌ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ಮೂಲ ದಾವೆ ಹೂಡಿದ್ದಾರೆ. ದಾವೆಯು ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ.

ಮಾಧ್ಯಮಗಳು ತಮ್ಮ ಟಿಆರ್‌ಪಿ, ಲೈಕ್ಸ್ ಮತ್ತು ವ್ಯೂಸ್‌ ಹೆಚ್ಚಿಸುವ ಉದ್ದೇಶದಿಂದ ಕುಂದಾಪುರ ಹೆಸರು ಬಳಸುತ್ತಿವೆ. ದೂರುದಾರರು ಕುಂದಾಪುರ ಮೂಲದವರಾಗಿದ್ದು, ಹೋಟೆಲ್ ನಡೆಸುತ್ತಿದ್ದು, ಹೋಟೆಲ್ ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ದಾವೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಚೈತ್ರಾ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ಕುಂದಾಪುರ ಎಂದು ಉಲ್ಲೇಖಿಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಮಾಡಬೇಕು. ಈಗಾಗಲೇ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ದಾವೆದಾರ ಕೋರಿದ್ದಾರೆ. ದಾವೆದಾರ ಪರ ವಕೀಲ ಎಚ್‌ ಪವನ ಚಂದ್ರ ಶೆಟ್ಟಿ ವಕಾಲತ್ತು ಹಾಕಿದ್ದಾರೆ.