Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜಕಾರ್ತ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ…!

ಜಕಾರ್ತ(ಇಂಡೋನೇಷ್ಯಾ): ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ದೆಹಲಿಯಿಂದ ಹೊರಟು ಇಂದು ಬೆಳಗ್ಗೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತ ತಲುಪಿದ್ದಾರೆ. ಜಕಾರ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಇಂಡೋನೇಷ್ಯಾದ ಜಕಾರ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಮಹಿಳಾ ಸಬಲೀಕರಣ ಮತ್ತು ಮಕ್ಕಳ ರಕ್ಷಣಾ ಸಚಿವ ಐ.ಗುಸ್ತಿ ಆಯು ಬಿಂಟಾಂಗ್ ದರ್ಮಾವತಿ ಸ್ವಾಗತಿಸಿದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇಂಡೋನೇಷ್ಯಾದ ಸಾಂಸ್ಕೃತಿಕ ನೃತ್ಯವನ್ನು ಪ್ರದರ್ಶಿಸಲಾಯಿತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ‘X’ ನಲ್ಲಿ ಪ್ರಧಾನಿ ಮೋದಿಯವರ ಆಗಮನದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಇಲ್ಲಿ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಕೆಲವು ಗಂಟೆಗಳ ನಂತರ ಅವರು ಭಾರತ-ಆಸಿಯಾನ್ ಶೃಂಗಸಭೆಗೆ ತೆರಳುತ್ತಾರೆ. ನಂತರ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಬೇಕು. ಆ ಬಳಿಕ ಮತ್ತೆ ಇಲ್ಲಿಗೆ ಬಂದು ನವದೆಹಲಿಗೆ ಮರಳಲಿದ್ದಾರೆ ಎಂದು ಹೇಳಿದರು.

ಶುಕ್ರವಾರ ಸಂಜೆ ನವದೆಹಲಿಯಲ್ಲಿ ಅದ್ಧೂರಿಯಾಗಿ ಪ್ರಾರಂಭವಾಗುವ ಜಿ-20 ಶೃಂಗಸಭೆಯ ವೇಳಾಪಟ್ಟಿಯ ನಡುವೆಯೂ ಪ್ರಧಾನಿ ಇಲ್ಲಿಗೆ ಬಂದಿದ್ದಾರೆ. ಈ ಭೇಟಿಗೆ ಅವರು ಎಷ್ಟು ಪ್ರಾಮುಖ್ಯತೆ ನೀಡಿದ್ದಾರೆ ಎಂಬುದನ್ನು ಇದು ಒತ್ತಿಹೇಳುತ್ತದೆ ಎಂದು ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಜಕಾರ್ತದ ರಿಟ್ಜ್-ಕಾರ್ಲ್ಟನ್ ಹೋಟೆಲ್​ನ್ನು ತಲುಪಿ ಎನ್‌ಆರ್​ಐಗಳನ್ನು ಭೇಟಿ ಮಾಡಿದರು.

ಜಕಾರ್ತಕ್ಕೆ ಬಂದಿಳಿದಿದ್ದೇನೆ. ಆಸಿಯಾನ್ ಸಂಬಂಧಿತ ಸಭೆಗಳನ್ನು ಎದುರು ನೋಡುತ್ತಿದ್ದೇನೆ ಮತ್ತು ಉತ್ತಮ ವೇದಿಕೆ ನಿರ್ಮಿಸಲು ವಿವಿಧ ನಾಯಕರೊಂದಿಗೆ ಸೇರಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಕಾರ್ತಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿರುವುದಾಗಿ ಹೇಳಿದರು. ಆಸಿಯಾನ್ ಜೊತೆಗಿನ ಸಂಬಂಧವು ಭಾರತದ ಪೂರ್ವ ನೀತಿಯ ಪ್ರಮುಖ ಸ್ತಂಭವಾಗಿದೆ ಎಂದು ಬಣ್ಣಿಸಿದರು. ಕಳೆದ ವರ್ಷ ಸ್ಥಾಪಿಸಲಾದ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವು ಎರಡೂ ಕಡೆಯ ಸಂಬಂಧಗಳಿಗೆ ಹೊಸ ಶಕ್ತಿಯನ್ನು ತುಂಬಿದೆ ಎಂದು ಅವರು ಹೇಳಿದರು. ಆಸಿಯಾನ್‌ನ ಪ್ರಸ್ತುತ ಅಧ್ಯಕ್ಷರಾಗಿ ಇಂಡೋನೇಷ್ಯಾ ಶೃಂಗಸಭೆಯನ್ನು ಆಯೋಜಿಸುತ್ತಿದೆ. ಆಸಿಯಾನ್ ಅನ್ನು ಈ ಪ್ರದೇಶದಲ್ಲಿ ಅತ್ಯಂತ ಪ್ರಭಾವಶಾಲಿ ಗುಂಪುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಮತ್ತು ಭಾರತ, ಯುಎಸ್, ಚೀನಾ, ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಇತರ ಹಲವು ದೇಶಗಳು ಅದರ ಸಂವಾದ ಪಾಲುದಾರರಾಗಿದ್ದಾರೆ.