ಜಮೀನು ವಿವಾದ: ಯುವಕನ ಮೇಲೆ ಹಲವು ಬಾರಿ ಟ್ರ್ಯಾಕ್ಟರ್ ಹರಿಸಿ ಹತ್ಯೆ
ರಾಜಸ್ಥಾನ: ಜಮೀನು ವಿಚಾರದಲ್ಲಿ ಎರಡು ಕಟುಂಬಗಳ ನಡುವೆ ಜಗಳ ನಡೆದು ಯುವಕನೊಬ್ಬನ ಮೇಲೆ ಹಲವು ಬಾರಿ ಟ್ರ್ಯಾಕ್ಟರ್ ಹರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಭರತ್ಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ನಿರ್ಪತ್ ಗುರ್ಜರ್ ಎಂಬ ಯುವಕ ಟ್ರ್ಯಾಕ್ಟರ್ ಹರಿದು ಸಾವನ್ನಪ್ಪಿದ ದುರ್ದೈವಿ. ಕಳೆದ ಹಲವಾರು ವರ್ಷಗಳಿಂದ ಅಡ್ಡಾ ಗ್ರಾಮದಲ್ಲಿ ಬಹದ್ದೂರ್ ಗುರ್ಜರ್ ಮತ್ತು ಅತಾರ್ ಸಿಂಗ್ ಗುರ್ಜರ್ ಕುಟುಂಬಗಳ ನಡುವೆ ಜಮೀನು ವಿಚಾರವಾಗಿ ಜಗಳ ನಡೆಯುತ್ತಿತ್ತು. ಆದರೆ ಬುಧವಾರ ಮುಂಜಾನೆ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳ ನಡುವೆ ಜಗಳ ತಾರಕಕ್ಕೇರಿತ್ತು. ಜಗಳ ಹಲ್ಲೆ ನಡೆಸುವ ಮಟ್ಟಕ್ಕೆ ಬೆಳೆದಾಗ ಬಹದ್ದೂರ್ ಗುರ್ಜರ್ ಜೊತೆಗಿದ್ದ ಸಹಚರನೊಬ್ಬ ಟ್ರ್ಯಾಕ್ಟರ್ ನ್ನು ಅತಾರ್ ಸಿಂಗ್ ರ ಮಗ ನಿರ್ಪತ್ ಗುರ್ಜರ್ ಎಂಬಾತನ ಮೇಲೆ ಹರಿಸಿದ್ದಾನೆ.
ಯುವಕನ ಮೇಲೆ ಎರಡೂ ಮೂರು ಟ್ರ್ಯಾಕ್ಟರ್ ಹರಿಸಿದ ಪರಿಣಾಮ ನಿರ್ಪತ್ ಗುರ್ಜರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.