ಜೈಲು ಸ್ಫೋಟಿಸುವ ಕುರಿತು ಬಂಧಿಖಾನೆ ಡಿಐಜಿಪಿಗೆ ಬೆದರಿಕೆ ಕರೆ ಹಾಕಿದ್ದ ವ್ಯಕ್ತಿ ಪತ್ತೆ..!
ಬೆಳಗಾವಿ: ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸ್ಫೋಟಿಸುವುದಾಗಿ ಹಾಗೂ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಅನಾಮಾಧೇಯ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಕ್ಕೇರಿಯ ಕಿರಣ ಮೋಷಿ (48) ಬೆದರಿಕೆ ಕರೆ ಮಾಡಿದ್ದ ಆರೋಪಿ. ತನ್ನ ಪತ್ನಿಯ ಹೆಸರಿನಲ್ಲಿರುವ ಸೀಮ್‌ನಿಂದ ಬಂಧೀಖಾನೆ ಇಲಾಖೆಯ ಉತ್ತರ ವಲಯದ ಡಿಐಜಿಪಿ ಟಿ.ಪಿ.ಶೇಷ ಅವರಿಗೆ ಭಾನುವಾರ ಮಧ್ಯಾಹ್ನ ಕರೆ ಮಾಡಿ, ಬೆದರಿಕೆಯನ್ನು ಹಾಕಿದ್ದನು. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು, ಸದ್ಯ ಆರೋಪಿಯನ್ನು ಆ ತಂಡ ಪತ್ತೆಹಚ್ಚಿದೆ. ಆರೋಪಿ ಕಿರಣ ಮೋಷಿ ಈ ಹಿಂದೆ 2022 ರಲ್ಲಿ ಬೇರೆಯವರ ಅಕೌಂಟ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಆಗ ಸೈಬರ್ ಕ್ರೈಮ್ ಆರೋಪದಡಿ 10 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿದ್ದನು. ಅಲ್ಲದೇ ಮೋಜು-ಮಸ್ತಿ ಹಾಗೂ ದಿಢೀರ್ ಜನಪ್ರಿಯವಾಗಬೇಕೆಂಬ ದುರುದ್ದೇಶದಿಂದ ಈ ರೀತಿ ಒಂದಿಲ್ಲೊಂದು ಹುಚ್ಚಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.