ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ನಡೆಸಲು ಅನುಮತಿ ನೀಡಿದ ಕೋರ್ಟ್
ವಾರಾಣಸಿ: ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ನಡೆಸಲು ವಾರಾಣಸಿಯ ನ್ಯಾಯಾಲಯವು ಬುಧವಾರ ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ.
ಇನ್ನು ಕೇವಲ 7 ದಿನಗಳಲ್ಲಿ ಮಸೀದಿಯ ಕೆಳಗಿರುವ 10 ಮೊಹರು ನೆಲಮಾಳಿಗೆಗಳಲ್ಲಿ ಹಿಂದೂ ಪೂಜೆಗಳು ಆರಂಭವಾಗಲಿದೆ. ಹಾಗೂ ಇದಕ್ಕೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಮಾಡುವಂತೆ ಕೋರ್ಟ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಈ ಬಗ್ಗೆ ಮಾತನಾಡಿದ ಹಿಂದೂ ಪರ ಅರ್ಜಿದಾರರ ವಕೀಲರಾದ ವಿಷ್ಣು ಶಂಕರ್ ಜೈನ್ ಅವರು, “ಹಿಂದೂ ಕಡೆಯವರು ’ವ್ಯಾಸ್ ಕಾ ತೆಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಇನ್ನು 7 ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಎಲ್ಲರಿಗೂ ಪೂಜೆ ಮಾಡುವ ಹಕ್ಕಿದೆ. ಜಿಲ್ಲಾಡಳಿತವು 7 ದಿನಗಳಲ್ಲಿ ಬೇಕಾದಂತಹ ವ್ಯವಸ್ಥೆ ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿಯಲ್ಲಿ ಮುಚ್ಚಿದ ಪ್ರದೇಶದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿರುವ ‘ಶಿವಲಿಂಗ’ದ ಸ್ವರೂಪ ಹಾಗೂ ಸಂಬಂಧಿತ ಲಕ್ಷಣಗಳನ್ನು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶಿಸುವಂತೆ ಹಿಂದೂ ಮಹಿಳಾ ಫಿರ್ಯಾದಿಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಇತ್ತೀಚೆಗಷ್ಟೇ ಪುರಾತತ್ವ ಇಲಾಖೆಯು ಮಸೀದಿಯಲ್ಲಿ ಸಮೀಕ್ಷೆ ನಡೆಸಿದ್ದು, ಅದರ ವರದಿ ಕೆಲದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿತ್ತು. ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಾಣ ಮಾಡಿಲ್ಲ, ಬದಲಾಗಿ ಮಂದಿರದ ಮೇಲ್ಗಡೆಯೇ ಮಸೀದಿಯನ್ನು ಕಟ್ಟಲಾಗಿದೆ ಎಂದು ಸಮೀಕ್ಷೆಯ ವರದಿ ಹೇಳಿತ್ತು.