Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಟ್ರಂಕ್‌ನಲ್ಲಿ ಮೂವರು ಸಹೋದರಿಯರ ಮೃತದೇಹ ಪತ್ತೆ- ಕಾರಣ ನಿಗೂಢ..!

ಚಂಡೀಗಢ: ಅಪ್ರಾಪ್ತ ವಯಸ್ಸಿನ ನಾಪತ್ತೆಯಾಗಿದ್ದ ಮೂರು ಸಹೋದಿರಯರ ಮೃತದೇಹ ತಮ್ಮ ಮನೆಯಲ್ಲಿದ್ದ ಟ್ರಂಕ್ ನಲ್ಲಿ ಪತ್ತೆಯಾದ ನಿಗೂಢ ಘಟನೆ ಪಂಜಾಬ್ ನ ಜಲಂಧರ್ ಜಿಲ್ಲೆಯ ಕಾನ್ಪುರ ಗ್ರಾಮದಲ್ಲಿ ನಡೆದಿದೆ. ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ.

ಮೃತ ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು 5 ಜನ ಮಕ್ಕಳಿದ್ದರು. ಪೋಷಕರು ಕೆಲಸ ಬಿಟ್ಟು ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ. ಈ ಕುರಿತು 3 ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮಾರನೇ ದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ಕಂಡು ಬಂದಿದೆ. ಅದಾಗಲೇ ಟ್ರಂಕ್ ಅನ್ನು ತೆರೆದಾಗ ಅದರಲ್ಲಿ ಮೂವರು ಬಾಲಕಿಯರ ಮೃತದೇಹಗಳು ಪತ್ತೆಯಾಗಿದೆ.

ಇದು ಬೆಚ್ಚಿಬೀಳಿಸುವಂತಹ ನಿಗೂಢ ಘಟನೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು.
ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.