Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಡಿಎಂಕೆ ಏಜೆಂಟರಂತೆ ಕಾಂಗ್ರೆಸ್ ಸರಕಾರದ ವರ್ತನೆ’-ಯಡಿಯೂರಪ್ಪ ಟೀಕೆ

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವು ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟೀಕಿಸಿದರು.

ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರಕಾರದ ಸಂಪೂರ್ಣ ವೈಫಲ್ಯವನ್ನು ಖಂಡಿಸಿ ವಿಧಾನಸೌಧದ ಮುಂಭಾಗದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಯಿಂದ ನಡೆದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಎಂಕೆ ಜೊತೆ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.

ಈ ಸತ್ಯಾಗ್ರಹದಲ್ಲಿ ಜೆಡಿಎಸ್ ಮುಖಂಡರೂ ಭಾಗವಹಿಸಿದ್ದರು.ರಾಜ್ಯದ ಜನರು ಬೀದಿಗಿಳಿದು ಹೋರಾಡುತ್ತಿದ್ದು, ಬಿಜೆಪಿ- ಜೆಡಿಎಸ್ ಇದಕ್ಕೆ ಎಲ್ಲ ರೀತಿಯ ಬೆಂಬಲ ಕೊಡುತ್ತದೆ ಎಂದು ಪ್ರಕಟಿಸಿದರು.ಈಗಲಾದರೂ ಇದನ್ನು ಸರಿಪಡಿಸಿ ಎಂದು ಆಗ್ರಹಿಸಿದರು. ಇಲ್ಲವಾದರೆ ಕಾನೂನು- ಸುವ್ಯವಸ್ಥೆ ಹದಗೆಡಲಿದೆ. ಅದಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ಎಚ್ಚರಿಸಿದರು.

ರಾಜ್ಯದ ಸರಕಾರ ಕೇವಲ ಕಾಂಗ್ರೆಸ್, ವಿಪಕ್ಷ ಮೈತ್ರಿಕೂಟದ ಹಿತ ಕಾಪಾಡುತ್ತಿದೆ. ಜನಹಿತವನ್ನು ಅದು ಮರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಆಕ್ಷೇಪಿಸಿದರು.

ಕಾವೇರಿ ನದಿ ಬಗ್ಗೆ ತಮಿಳುನಾಡಿದ ಸಚಿವರ ಹೇಳಿಕೆಯನ್ನು ಖಂಡಿಸಿದ ಅವರು, ರಾಜ್ಯ ಸರಕಾರವು ಡಿಎಂಕೆ, ಸ್ಟಾಲಿನ್ ಅವರ ಜೊತೆ ಮಾತನಾಡಲು ಸಿದ್ಧವಿಲ್ಲ ಎಂದು ಟೀಕಿಸಿದರು.
ಸ್ಟಾಲಿನ್, ಸೋನಿಯಾ ಗಾಂಧಿ ಜೊತೆ ಮಾತನಾಡಲು ಸಿದ್ರಾಮಣ್ಣ, ಡಿ.ಕೆ.ಶಿವಕುಮಾರರಿಗೆ ಧೈರ್ಯವಿಲ್ಲ. ಅವರ ಭಯದಿಂದ ನೀರು ಬಿಡುತ್ತಿದ್ದಾರೆ ಎಂದು ದೂರಿದರು.

ನಾಡಿಗೆ ದ್ರೋಹ ಬಗೆಯುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಮೈತ್ರಿ ಸರಕಾರ ಇದ್ದಾಗ ಉತ್ತಮ ಆಡಳಿತ ನೀಡಿದ್ದನ್ನು ನೆನಪಿಸಿಕೊಂಡರು.

ನಮ್ಮ ನಾಡಿನ ರೈತರ ಕುರಿತು ಈ ಸರಕಾರ ನಿರ್ಲಕ್ಷ್ಯ ತೋರಿದೆ. ಸರಕಾರ ಕಾವೇರಿ ವಿಚಾರದಲ್ಲಿ ನಿರಂತರವಾಗಿ ಎಡವಿದೆ. ಇದು ಖಂಡನೀಯ ಎಂದು ತಿಳಿಸಿದರು.