ತಂದೆಯ ಕಳೆದುಕೊಂಡ ಮಡುಗಟ್ಟಿದ ನೋವಿನಲ್ಲೂ ಯುಪಿಎಸ್ ಪರೀಕ್ಷೆ ಎದುರಿಸಿ ಯಶಸ್ವಿಯಾದ ಭಜರಂಗ್ ಯಾದವ್
ಉತ್ತರ ಪ್ರದೇಶದ ಬಸ್ತಿ ಪ್ರದೇಶದ ಪುಟ್ಟ ಕುಗ್ರಾಮದಿಂದ ಬಂದ ಭಜರಂಗ್ ಯಾದವ್, ಬಸ್ತಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, ಅವರು ತಮ್ಮ ಪ್ರೌಢ ಶಿಕ್ಷಣವನ್ನು ಕಲ್ವಾರಿಯ ಲಿಟಲ್ ಫ್ಲವರ್ ಸ್ಕೂಲ್ನಲ್ಲಿ ಪೂರ್ಣಗೊಳಿಸಿ, ನಂತರ ಬಸ್ತಿಯಲ್ಲಿರುವ ಊರ್ಮಿಳಾ ಎಜುಕೇಷನಲ್ ಅಕಾಡೆಮಿಯಲ್ಲಿ ತಮ್ಮ ಮಧ್ಯಂತರ ಶಿಕ್ಷಣವನ್ನು ಪಡೆದರು.
ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂಬ ಗುರಿ ಹೊಂದಿದ್ದ ಯಾದವ್ ತಮ್ಮ ಮನೆಯವರ ಸಹಕಾರ ಪಡೆದು 2019 ರಲ್ಲಿ, ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಗಳಿಸಿ ನಂತರ UPSC ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಗೆ ತೆರಳಿದರು.
ಆದರೆ ಜೀವನ ನಾವಂದುಕೊಂಡಂತಿರೋದಿಲ್ಲ ಅನ್ನೋದಕ್ಕೆ ಭಜರಂಗ್ ಯಾದವ್ ಅವರ ಜೀವನವೇ ಜ್ವಲಂತ ಉದಾಹರಣೆಯಾಗಿದೆ.ಯುಪಿಎಸ್ಸಿ ಪರೀಕ್ಷೆಯ ತಯಾರಿಯಲ್ಲಿದ್ದ ಯಾದವ್ ಅವರ ಜೀವನದಲ್ಲಿ ಒಂದು ಕಹಿ ಘಟನೆ ನಡೆದುಹೋಯಿತು. 2020 ರಲ್ಲಿ ಯಾದವ್ ಅವರ ತಂದೆಯನ್ನು ಕೊಲೆ ಮಾಡಲಾಯಿತು.ಇದರಿಂದ ಯಾದವ್ ಅವರ ಕುಟುಂಬ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಾದ ಸನ್ನಿವೇಶಗಳು ಸೃಷ್ಟಿಯಾದವು. ಆದರೆ ದುಃಖದ ನಡುವೆಯೂ ಛಲ ಬಿಡದ ಯಾದವ್ ಇನ್ನಷ್ಟು ದೃಢಸಂಕಲ್ಪ ತೊಟ್ಟು ಯುಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾದರು.
ದೃಷ್ಟಿ ಐಎಎಸ್ ಕೋಚಿಂಗ್ನ ಸಂಸ್ಥಾಪಕ ವಿಕಾಸ್ ದಿವ್ಯಕೀರ್ತಿ ಅವರು ನಡೆಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಂಡ ಅವರು ಈ ಸಂಸ್ಥೆಯ ಅಧ್ಯಯನ ಪೋರ್ಟಲ್ ನಲ್ಲಿ ಉಚಿತ ಬೋಧನೆ ಕೇಳುವ ಮೂಲಕ 2022 ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದು 454 ನೇ ರ್ಯಾಂಕ್ ಪಡೆದು ಉತ್ತೀರ್ಣರಾದರು.
ಈ ಮೂಲಕ ನಮ್ಮ ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರು ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ಭಜರಂಗ್ ಯಾದವ್ ನಿರ್ದೇಶನರಾಗಿದ್ದಾರೆ.