Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಡರಾತ್ರಿ ಹಠಾತ್ ತಪಾಸಣೆ: ಬಾಲಕಿಯರ ಹಾಸ್ಟೆಲ್‌ನಲ್ಲಿ 100ರಲ್ಲಿ 89 ವಿದ್ಯಾರ್ಥಿನಿಯರು ನಾಪತ್ತೆ….!

ಉತ್ತರ ಪ್ರದೇಶ ಸರ್ಕಾರ ನಡೆಸುತ್ತಿರುವ ಬಾಲಕಿಯರ ವಸತಿ ಹಾಸ್ಟೆಲ್‌ನಲ್ಲಿ ನಡೆಸಲಾದ ಹಠಾತ್ ತಪಾಸಣೆಯ ವೇಳೆ ಅಲ್ಲಿ ದಾಖಲಾಗಿದ್ದ ಒಟ್ಟು 100 ವಿದ್ಯಾರ್ಥಿನಿಯರಲ್ಲಿ 11 ಮಂದಿ ಮಾತ್ರ ಪತ್ತೆಯಾಗಿದ್ದು, ಉಳಿದ 89 ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ರಾತ್ರಿ, ಹಿರಿಯ ಅಧಿಕಾರಿಯೊಬ್ಬರು ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಾರ್ಡನ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪರಸ್ಪುರದ ಕಸ್ತೂರಬಾ ಗಾಂಧಿ ವಸತಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಸೋಮವಾರ ರಾತ್ರಿ ತಪಾಸಣೆ ನಡೆಸಲಾಯಿತು. ಅಲ್ಲಿ ಒಟ್ಟು 100 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದಾರೆ. ಆದರೆ, 11 ವಿದ್ಯಾರ್ಥಿನಿಯರು ಮಾತ್ರ ಹಾಸ್ಟೆಲ್‌ನಲ್ಲಿ ಹಾಜರಿರುವುದು ಕಂಡುಬಂದಿದೆ. 89 ವಿದ್ಯಾರ್ಥಿನಿಯರ ಗೈರುಹಾಜರಿಯ ಬಗ್ಗೆ ವಾರ್ಡನ್ ಸರಿತಾ ಸಿಂಗ್ ಅವರನ್ನು ಕೇಳಿದಾಗ ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ.

“ಇದು ಗಂಭೀರ ನಿರ್ಲಕ್ಷ್ಯ. ವಸತಿ ಬಾಲಕಿಯರ ಹಾಸ್ಟೆಲ್‌ಅನ್ನು ಈ ರೀತಿ ನಡೆಸುವಂತಿಲ್ಲ” ಎಂದು ಜಿಲ್ಲಾಧಿಕಾರಿ ಎಫ್‌ಐಆರ್ ದಾಖಲಿಸಲು ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹಾಸ್ಟೆಲ್‌ ವಾರ್ಡನ್, ಪೂರ್ಣಾವಧಿ ಶಿಕ್ಷಕ, ಕಾವಲುಗಾರ ಮತ್ತು ಪ್ರಾಂತೀಯ ರಕ್ಷಣಾ ದಳದ (ಪಿಆರ್‌ಡಿ) ಜವಾನನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್‌ಎ), ಪ್ರೇಮ್ ಚಂದ್ ಯಾದವ್ ತಿಳಿಸಿದ್ದಾರೆ.