Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು’- ಸಿಎಂ

ಬೆಂಗಳೂರು: ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದಕ್ಷಿಣ ಭಾರತ ರಾಜ್ಯಗಳ ಪೋಲೀಸ್ ಮಹಾನಿದೇರ್ಶಕರ ಸಮನ್ವಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,ಹಗಲಿರುಳು ಎನ್ನದೇ ಕಾರ್ಯನಿರ್ವಹಿಸುವ ಪೋಲಿಸ್ ಪಡೆಗಳ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ನಿಟ್ಟಿನಲ್ಲಿ ಪೋಲಿಸರು ಕ್ರಿಯಾತ್ಮಕವಾಗಿರಬೇಕು. ಕಳೆದ ಹಲವು ವರ್ಷಗಳಲ್ಲಿ ಸೈಬರ್ ದಾಳಿಗಳು ವಿವಿಧ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಆನ್ ಲೈನ್ ಮೂಲಕ ಮೋಸ ಮಾಡುವುದು ಅಧಿಕವಾಗಿದೆ. ಇದು ವ್ಯಕ್ತಿಗತವಾಗಿ ಹಾನಿಯಲ್ಲದೇ ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿಯಾಗಿದೆ ಎಂದರು.

ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು ಸೈಬರ್ ಅಪರಾಧಿಗಳನ್ನು ಮಟ್ಟಹಾಕಲು ಸಹಾಯಕವಾಗಿವೆ. 2003 ರಲ್ಲಿ ಸೈಬರ್ ಅಪರಾಧಗಳ ಪೋಲೀಸ್ ಠಾಣೆಯನ್ನು ತೆರೆದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೈಬರ್ ಅಪರಾಧ ತಡೆಗಾಗಿ ಸಿಇಎನ್ ಪೋಲಿಸ್ ಠಾಣೆಗಳನ್ನು ರಾಜ್ಯ ಹೊಂದಿದೆ. ಇಂಥ ಪ್ರಕರಣಗಳನ್ನು ನಿರ್ವಹಿಸಲೆಂದೇ ಸೈಬರ್ ಠಾಣೆಯ ಪೋಲಿಸ್ ಅಧಿಕಾರಿಗಳು ವಿಶೇಷ ತರಬೇತಿ ಪಡೆದಿದ್ದಾರೆ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕ ವ್ಯವಸ್ಥೆ ಹಾಗೂ ತಮ್ಮ ಪ್ರದೇಶದ ಪ್ರತಿಯೊಬ್ಬರ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಪೋಲೀಸರಿಂದ ಅಚಲ ಬದ್ಧತೆ, ಸಮರ್ಪಣೆ ಹಾಗೂ ಕರ್ತವ್ಯಪರತೆಯನ್ನು ನಿರೀಕ್ಷಿಸಲಾಗುತ್ತದೆ ಎಂದರು.

ಪೋಲಿಸ್ ತಂತ್ರಗಾರಿಕೆಯಲ್ಲಿ ನಿರಂತರ ಮಾರ್ಪಾಡು ಅಗತ್ಯ. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಪರಾಧಿ ಚಟುವಟಿಕೆಗಳಿಂದ ಹಿಡಿದು ಡಿಜಿಟಲ್ ವಲಯದ ಬೆದರಿಕೆಗಳನ್ನೂ ದೇಶ ಎದುರಿಸುತ್ತಿದೆ. ಆಧುನಿಕ ಸಮಾಜದ ಸಂಕೀರ್ಣತೆಗಳೂ ಕೂಡ ಹೊಸ ಮಾದರಿಯ ಅಪರಾಧಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಪೋಲಿಸ್ ತಂತ್ರಗಾರಿಕೆಯಲ್ಲಿಯೂ ನಿರಂತರವಾಗಿ ಮಾರ್ಪಾಡು ತರಬೇಕಾದ ಅವಶ್ಯಕತೆ ಇದೆ ಎಂದರು.